ನ್ಯೂಸ್

38 ಮಂದಿ ಸಾವಿಗೆ ಕಾರಣವಾದ 2024ರ ಅಜೆರ್ಬೈಜಾನಿ ಜೆಟ್ ಅಪಘಾತದಲ್ಲಿ ರಷ್ಯಾ ಪಾತ್ರವನ್ನು ಒಪ್ಪಿಕೊಂಡ ಪುಟಿನ್| Vladimir Putin

Vladimir Putin: 2024ರ ಡಿಸೆಂಬರ್​ನಲ್ಲಿ 38 ಮಂದಿಯನ್ನು ಬಲಿ ತೆಗೆದುಕೊಂಡು ಅಜೆರ್ಬೈಜಾನಿ ಜೆಟ್ ಅಪಘಾತದಲ್ಲಿ ರಷ್ಯಾದ ಪಾತ್ರವಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ(ಅ. 09) ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತಜಕಿಸ್ತಾನದ ದುಶಾನ್ಬೆಯಲ್ಲಿ ನಡೆದ 2ನೇ ರಷ್ಯಾ-ಮಧ್ಯ ಏಷ್ಯಾ ಶೃಂಗಸಭೆಯ ಹೊರತಾಗಿ ಪುಟಿನ್ ಅವರು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಷ್ಯಾದ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಗಳಿಂದ ಜೆಟ್ ಅಪಘಾತವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ರಷ್ಯಾದ ಸರ್ಕಾರಿ ಸ್ವಾಮ್ಯದ ಸ್ಪುಟ್ನಿಕ್ ಸುದ್ದಿ ಸಂಸ್ಥೆಯ ಪ್ರಕಾರ, ಉಕ್ರೇನಿಯನ್ ಡ್ರೋನ್‌ಗಳನ್ನು ಪತ್ತೆಹಚ್ಚುವ ರಷ್ಯಾದ ಕ್ಷಿಪಣಿಗಳು ನಾಗರಿಕ ವಿಮಾನದಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಸ್ಫೋಟಗೊಂಡಾಗ ಈ ಘಟನೆ ಸಂಭವಿಸಿದೆ ಎಂದು ಪುಟಿನ್, ಅಜೆರ್ಬೈಜಾನಿ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ರಷ್ಯಾ ತನ್ನ ಗಡಿಯನ್ನು ದಾಟಿದ ಮೂರು ಉಕ್ರೇನಿಯನ್ ಡ್ರೋನ್‌ಗಳನ್ನು ಪತ್ತೆಹಚ್ಚುತ್ತಿತ್ತು. ರಷ್ಯಾ ಹಾರಿಸಿದ ಎರಡು ವಾಯು ರಕ್ಷಣಾ ಕ್ಷಿಪಣಿಗಳು AZAL ವಿಮಾನವನ್ನು ನೇರವಾಗಿ ಹೊಡೆದಿಲ್ಲ. ಅವು ಕೆಲವು ಮೀಟರ್ ದೂರದಲ್ಲಿ ಸ್ಫೋಟಗೊಂಡಿವೆ. ವಿಮಾನವು ಕ್ಷಿಪಣಿಗಳ ಸಿಡಿತದಿಂದ ಅಪಘಾತವಾಗಿಲ್ಲ. ತುಣುಕುಗಳಿಂದ ಹಾನಿಗೊಳಗಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಿದೆ.

2022 ಫೆಬ್ರವರಿ 24ರಿಂದ ರಷ್ಯಾ ಮತ್ತು ಉಕ್ರೇನ್ ಮಿಲಿಟರಿ ಸಂಘರ್ಷದಲ್ಲಿ ತೊಡಗಿವೆ. 2024 ಡಿಸೆಂಬರ್ 25ರಂದು 62 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ಮೂವರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 67 ಜನರನ್ನು ಹೊತ್ತ ವಿಮಾನವು ಅಜೆರ್ಬೈಜಾನ್‌ನ ರಾಜಧಾನಿಯ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹೊರಟಿತ್ತು. ಕಝಾಕಿಸ್ತಾನದ ಅಕಾಟುದಲ್ಲಿ ಅಪಘಾತಕ್ಕೀಡಾಗಿ 35 ಪ್ರಯಾಣಿಕರು, ಇಬ್ಬರೂ ಪೈಲಟ್‌ಗಳು ಮತ್ತು ಒಬ್ಬ ಫ್ಲೈಟ್ ಅಟೆಂಡೆಂಟ್ ಸಾವನ್ನಪ್ಪಿದರು. (ಏಜೆನ್ಸೀಸ್)