ನ್ಯೂಸ್

ಕೇರಳದಿಂದ ಕಾಂಗ್ರೆಸ್‌ಗೆ ಗುಡ್ ನ್ಯೂಸ್; ಭರ್ಜರಿ ಗೆಲುವು ಸಾಧಿಸಿದ ಚಾಂಡಿ ಉಮ್ಮನ್, ಎರಡನೇ ಸ್ಥಾನದಲ್ಲಿ ಸಿಪಿಐ(ಎಂ)

ಕೇರಳ: ಪುತ್ತುಪ್ಪಲ್ಲಿಯಲ್ಲಿ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಿದೆ. ಕೇರಳದ ಪುತ್ತುಪಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಭ್ಯರ್ಥಿ ಚಾಂಡಿ ಉಮ್ಮನ್ ಭರ್ಜರಿ ಗೆಲುವು ಸಾಧಿಸಿದ್ದು, 36,454 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

ಇದು ಅಪ್ಪ ಅವರ 13ನೇ ಗೆಲುವು. ತಂದೆಯನ್ನು ಪ್ರೀತಿಸಿದ ಪುತ್ತುಪಲ್ಲಿ ಜನರ ಗೆಲುವು. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಕಳೆದುಕೊಳ್ಳುವುದಿಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಾಂಡಿ ಉಮ್ಮನ್ ಹೇಳಿದ್ದಾರೆ.

ಸೆ. 5 ರಂದು ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಉಪಚುನಾವಣೆಗೆ ಒಟ್ಟು 182 ಬೂತ್‌ಗಳಿಗೆ ಮತದಾನ ನಡೆದಿದೆ.

ಉಪಚುನಾವಣೆಯಲ್ಲಿನ ಅಮೋಘ ಗೆಲುವು ಮೋದಿ ಮತ್ತು ಪಿಣರಾಯಿ ವಿಜಯನ್ ಸರ್ಕಾರಕ್ಕೆ ಸ್ಪಷ್ಟ ಸಂದೇಶವಾಗಿದೆ. ಬಿಜೆಪಿ ಮತ್ತು ಸಿಪಿಎಂ ಎರಡನ್ನೂ ಪುತ್ತುಪಲ್ಲಿ ಜನರು ಹೊರಹಾಕಿದ್ದಾರೆ. ಕೇರಳದ ಯಾವುದೇ ಉಪಚುನಾವಣೆಯಲ್ಲಿ ಇಷ್ಟು ದೊಡ್ಡ ಅಂತರ ಕಂಡುಬಂದಿಲ್ಲ. ಸಂದೇಶವು ತುಂಬಾ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.

ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದಿಂದಾಗಿ ಪುತ್ತುಪ್ಪಲ್ಲಿ ಉಪಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಪುತ್ತುಪ್ಪಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರನ್ನು ಕಣಕ್ಕಿಳಿಸಿದ್ದು, ಆಡಳಿತ ಪಕ್ಷ ಸಿಪಿಐ (ಎಂ) ಜಾಕ್ ಸಿ ಥಾಮಸ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿತ್ತು.

ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಕೇರಳದ 10ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು 1970 ರಿಂದ 2023 ರವರೆಗೆ ರಾಜ್ಯದಲ್ಲಿ ವಿಧಾನಸಭಾ ಸದಸ್ಯರಾಗಿ (MLA) ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಒಟ್ಟು 140 ಸ್ಥಾನಗಳಿವೆ. ಇವುಗಳಲ್ಲಿ 98 ಸ್ಥಾನಗಳನ್ನು ಆಡಳಿತಾರೂಢ ಸಿಪಿಐ(ಎಂ) ಸರ್ಕಾರ ಮತ್ತು ಅದರ ಸಮ್ಮಿಶ್ರ ಪಕ್ಷಗಳು ಹೊಂದಿವೆ. ಪ್ರತಿಪಕ್ಷ 40 ಸ್ಥಾನಗಳನ್ನು ಹೊಂದಿದೆ.

ಗಮನಾರ್ಹವಾಗಿ, ಇದು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಮತ್ತು ಇಂಡಿಯಾ ನಡುವಿನ ಮೊದಲ ಚುನಾವಣೆಯಾಗಿದೆ. ಪುತ್ತುಪಲ್ಲಿ ಹೊರತಾಗಿ, ಪಶ್ಚಿಮ ಬಂಗಾಳದ ಜಲ್ಪೈಗುರಿಯ ಧುಪ್ಗುರಿ, ಜಾರ್ಖಂಡ್‌ನ ಡುಮ್ರಿ ಮತ್ತು ಉತ್ತರಾಖಂಡದ ಬಾಗೇಶ್ವರ್, ಬೊಕ್ಸಾನಗರ ಮತ್ತು ತ್ರಿಪುರಾದ ಧನ್‌ಪುರ ಮತ್ತು ಉತ್ತರ ಪ್ರದೇಶದ ಘೋಸಿ ಕ್ಷೇತ್ರಗಳ ಉಪಚುನಾವಣೆ ಎಣಿಕೆ ನಡೆಯುತ್ತಿದೆ.