ಆಂಧ್ರಪ್ರದೇಶ: 'ಪುಷ್ಪ' ಮೊದಲನೇ ಭಾಗ 2021ರಲ್ಲಿ ಬಿಡುಗಡೆಯಾಯಿತು. ಚಿತ್ರದ ಹಾಡುಗಳು, ಆಕ್ಷನ್ ಮತ್ತು ಅಲ್ಲು ಅರ್ಜುನ್ ಅವರ ನಟನೆ ಎಲ್ಲವೂ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿವೆ. ದಕ್ಷಿಣ ಮಾತ್ರವಲ್ಲದೆ, ವಿದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತ್ತು ಈ ಚಿತ್ರ. ಈಗ ಪುಷ್ಪ 2 ಚಿತ್ರಕ್ಕಾಗಿ ಕಾತರದಿಂದ ಕಾಯಲಾಗುತ್ತಿದೆ. ಆಗಸ್ಟ್ 15, 2024 ರಂದು ಚಿತ್ರಮಂದಿರಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಅಲ್ಲಿಗೆ ಅಭಿಮಾನಿಗಳು ಇನ್ನು ಸ್ವಲ್ಪ ದಿನಗಳು ಕಾಯಬೇಕಿದೆ. ಪುಷ್ಪ 2 ಬಿಡುಗಡೆಯ ದಿನಾಂಕದ ಜೊತೆಗೆ, ಚಿತ್ರದ ಪುಷ್ಪ ಲುಕ್ ಸಹ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ನೋಡಿದ ನಂತರ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಕೊಂಡಿದೆ. ಆದರೆ ಈ ಪೋಸ್ಟರ್‌ನಲ್ಲಿ ಸಾಕಷ್ಟು ವಿಷಯಗಳಿವೆ. ಪೋಸ್ಟರ್ ಗಮನಿಸಿದರೆ ಓಕೆ, ಇಲ್ಲದಿದ್ದರೆ, ಆ ಬಗ್ಗೆ ನಾವೇ ಹೇಳುತ್ತೇವೆ.
ಪುಷ್ಪ 2 ಪೋಸ್ಟರ್‌ನಲ್ಲಿ ಪುಷ್ಪ ಅವರ ಕೈ ಮಾತ್ರ ಗೋಚರಿಸುತ್ತದೆ. ಪುಷ್ಪ ರಾಜ್ ಎಡಗೈಯ ಮೂರು ಬೆರಳುಗಳಿಗೆ ಚಿನ್ನದ ಉಂಗುರಗಳು ಮತ್ತು ಕಿರುಬೆರಳಿಗೆ ಅಂದರೆ ಪಿಂಕಿ ಬೆರಳಿಗೆ ಗುಲಾಬಿ ಬಣ್ಣದ ನೇಲ್ ಪಾಲಿಶ್ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಇವರ ಕಿರುಬೆರಳಿಗೆ ನೇಲ್ ಪಾಲಿಷ್ ಹಾಕಿಸಿಕೊಂಡಿರುವುದರ ಹಿಂದೆ ದೊಡ್ಡ ಕಥೆಯೇ ಇದೆಯಂತೆ. ಕಿರುಬೆರಳು ಫೋಟೋದಲ್ಲಿ ವಿಶೇಷವಾಗಿ ಗೋಚರಿಸುತ್ತದೆ. ಉಗುರುಗಳು ತುಂಬಾ ಉದ್ದವಾಗಿದ್ದು ಅವುಗಳ ಮೇಲೆ ನೇಲ್ ಪಾಲಿಷ್ ಕೂಡ ಹಚ್ಚಲಾಗಿದೆ. ಇದರ ಹಿಂದಿನ ಕಾರಣವೇನು ಎಂಬ ಪ್ರಶ್ನೆ ಎದ್ದಿದ್ದು, ಈ ಬಗ್ಗೆ ಹುಡುಕಿದಾಗ ಇದಕ್ಕೆ ಉತ್ತರವೂ ಸಿಕ್ಕಿದೆ. ಕೆಲವು ಸಂಸ್ಕೃತಿಯಲ್ಲಿ, ಉದ್ದನೆಯ ಉಗುರುಗಳ ಮೇಲೆ ಗುಲಾಬಿ ಬಣ್ಣವನ್ನು ಧರಿಸುವುದು ಸಂಪತ್ತು ಮತ್ತು ಉನ್ನತ ಸಾಮಾಜಿಕ ಸ್ಥಾನಮಾನದ ಸಂಕೇತವಾಗಿದೆ. ಅಲ್ಲಿಗೆ ಪುಷ್ಪ ಈ ಬಾರಿ ವಿಭಿನ್ನವಾಗಿರಲಿದೆ ಎಂಬುದು ತಿಳಿಯುತ್ತದೆ.
ಈ ಪೋಸ್ಟರ್ ಬಿಡುಗಡೆಯಾದ ನಂತರ ನೆಟ್ಟಿಗರು ನಿರ್ದೇಶಕ ಸುಕುಮಾರ್ ಅವರ ದೂರದೃಷ್ಟಿಯನ್ನು ಶ್ಲಾಘಿಸುತ್ತಿದ್ದಾರೆ. ಈಗಾಗಲೇ ಬನ್ನಿ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ 'ಪುಷ್ಪ 2' ಚಿತ್ರದ ಫಸ್ಟ್ ಲುಕ್ ಎಲ್ಲರ ಮನಸೆಳೆದಿದೆ. ಬನ್ನಿ ಸೀರೆ ಕಟ್ಟಿಕೊಂಡು, ಮೂಗುಬೊಟ್ಟು ಧರಿಸಿದ್ದು, ಬರೀ ಪೋಸ್ಟರ್ನಿಂದಲೇ ಸಿನಿಮಾದ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದಾರೆ ನಿರ್ದೇಶಕರು.
ಪುಷ್ಪ 2 ಚಿತ್ರವನ್ನು ನಿರ್ದೇಶಕ ಸುಕುಮಾರ್ ಮಾಡುತ್ತಿದ್ದಾರೆ. ಇದು ಪ್ರಪಂಚದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಇತ್ತೀಚೆಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪುಷ್ಪ ಪಾತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.