ಆಂಧ್ರಪ್ರದೇಶ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪಾ 2' ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡುತ್ತಿದ್ದು, ಇದೀಗ ಚಿತ್ರತಂಡ ಸಿನಿಮಾದ ಪ್ರಮುಖ ಪಾತ್ರಧಾರಿ ಫಹದ್ ಫಾಸಿಲ್ ಅವರ 41ನೇ ಜನ್ಮದಿನಕ್ಕೆ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ಅನಾವರಣಗೊಳಿಸಿದೆ.
'ಪುಷ್ಪಾ 2' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಲು ಸಜ್ಜಾಗಿರುವ ಫಹದ್ ಫಾಸಿಲ್ ಅವರ 41ನೇ ಹುಟ್ಟುಹಬ್ಬಕ್ಕೆ ಇಂದು ಚಿತ್ರತಂಡ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸುವ ಮುಖೇನ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಟಾಲಿವುಡ್ನ ಹೆಸರಾಂತ ನಿರ್ದೇಶಕ ಸುಕುಮಾರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಟ್ ಪುಷ್ಪಾ 1ರ ಮುಂದುವರಿದ ಭಾಗವಾಗಿರುವ ಪುಷ್ಪಾ 2 ಚಿತ್ರದ ಮೇಲೆ ಸಿನಿಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದ್ದು, ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.
ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಅನಸೂಯಾ ಭಾರದ್ವಾಜ್, ಸುನೀಲ್, ಜಗದೀಶ್, ಫಹದ್ ಫಾಸಿಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಪುಷ್ಪ 2 ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).