ನ್ಯೂಸ್

ಪುಷ್ಪ 2 ಹಾಡಿನ ಚಿತ್ರೀಕರಣ; ಮುಂದಿನ ತಿಂಗಳು ಚಿತ್ರೀಕರಣದಲ್ಲಿ ರಶ್ಮಿಕಾ ಭಾಗಿ…

ಕಳೆದ ಡಿಸೆಂಬರ್​ನಲ್ಲಿ ಬಹುನಿರೀಕ್ಷಿತ ‘ಪುಷ್ಪ - ದಿ ರೂಲ್’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ಹೈದರಾಬಾದ್​ನಲ್ಲಿ ಅದ್ಧೂರಿ ಸೆಟ್ ನಿರ್ವಿುಸಿ, ಅಲ್ಲು ಅರ್ಜುನ್ ಎಂಟ್ರಿ ಸಾಂಗ್ ಚಿತ್ರೀಕರಣ ಮಾಡಲಾಗಿದೆ. ಸದ್ಯ ವಿಶಾಖಪಟ್ಟಣಂನಲ್ಲಿ ಬಂದರು ಸೆಟ್ ನಿರ್ವಿುಸಿ ಅದೇ ಹಾಡಿನ ಮುಂದುವರಿದ ಭಾಗವನ್ನು ಚಿತ್ರೀಕರಿಸಲಾಗುತ್ತಿದೆ.

ಮೊದಲ ಭಾಗದಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಇದೀಗ ಸೀಕ್ವಲ್​ನಲ್ಲೂ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಭರವಸೆಯೊಂದಿಗೆ ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ನೃತ್ಯನಿರ್ದೇಶಕ ಶೇಖರ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ 100ಕ್ಕೂ ಅಧಿಕ ಡಾನ್ಸರ್​ಗಳ ಜತೆ ಅಲ್ಲು ಅರ್ಜುನ್ ಪರಿಚಯದ ಹಾಡನ್ನು ಚಿತ್ರೀಕರಿಸಲಾಗುತ್ತಿದೆ.

ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಚಿತ್ರತಂಡ ಮತ್ತೆ ಹೈದರಾಬಾದ್​ನಲ್ಲಿ ಶೂಟಿಂಗ್ ಮುಂದುವರಿಸಲಿದೆ. ಫೆಬ್ರವರಿಯಲ್ಲಿ ಇನ್ನೊಂದು ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆಗ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸುಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು. -ಏಜೆನ್ಸೀಸ್