ನ್ಯೂಸ್

'ಪುಷ್ಪ 2' ಬಿಡುಗಡೆಗೂ ಮುನ್ನವೇ ಭಾಗ 1 ರೀ-ರಿಲೀಸ್​! ಈಗ್ಯಾಕೆ ಇಂತಹ ದಿಢೀರ್ ನಿರ್ಧಾರ? | Theatres

ಆಂಧ್ರಪ್ರದೇಶ: ಸುಕುಮಾರ್​ ನಿರ್ದೇಶನದ ಹಾಗೂ ಟಾಲಿವುಡ್​ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರ ಇದೇ ಡಿಸೆಂಬರ್ 05ರಂದು ಜಾಗತಿಕ ರಿಲೀಸ್​ಗಾಗಿ ಎದುರುನೋಡುತ್ತಿದೆ. ಈ ಬಗ್ಗೆ ಫ್ಯಾನ್ಸ್​ ಕೂಡ ತೀವ್ರ ಕಾತರ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ತರಬೇಡಿ ಎಂದು ಚಿತ್ರತಂಡಕ್ಕೆ ಜಾಲತಾಣಗಳ ಮುಖೇನ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಬದ್ಧವಾಗಿರುವ ಚಿತ್ರದ ತಯಾರಕರು, ಈಗಾಗಲೇ ತೆರೆಕಂಡಿರುವ ಹಾಗೂ ಸೂಪರ್ ಹಿಟ್ ಆಗಿರುವ 'ಪುಷ್ಪ ಭಾಗ 1' ಅನ್ನು ಮರುಬಿಡುಗಡೆ (Theatres) ಮಾಡಲು ಮುಂದಾಗಿರುವುದು ಸದ್ಯ ಚಿತ್ರ ಪ್ರೇಮಿಗಳಲ್ಲಿ ಗೊಂದಲ ಹುಟ್ಟುಹಾಕಿದೆ.

ಜಾಗತಿಕವಾಗಿ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಲು ಸಜ್ಜಾಗಿರುವ 'ಪುಷ್ಪ 2' ಚಿತ್ರಕ್ಕಾಗಿ ಫ್ಯಾನ್ಸ್​ಗಳು ದಿನಗಣನೆ ಎಣಿಸುತ್ತಿದ್ದಾರೆ. ಚಿತ್ರದ ಬಹುತೇಕ ಭಾಗಗಳ ಚಿತ್ರೀಕರಣ ಮುಗಿದಿದ್ದೇ ಆದರೂ ವಿಶೇಷ ಹಾಡು ಮತ್ತು ಸಿನಿಮಾದ ಒಂದು ಸಾಂಗ್​ನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಈ ಪೈಕಿ ವಿಶೇಷ ಹಾಡಿನಲ್ಲಿ ಕನ್ನಡತಿ ಶ್ರೀಲೀಲಾ, ಐಕಾನ್​ ಸ್ಟಾರ್​ ಜತೆಗೆ ಜಬರ್​ದಸ್ತ್​ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳನ್ನು ತುಂಬಿಕೊಂಡಿರುವ ಪುಷ್ಪ 2 ಸಿನಿಮಾದ ಮಧ್ಯೆ ಭಾಗ 1ರ ರೀ-ರಿಲೀಸ್​ ಸದ್ಯ ಸಾಕಷ್ಟು ಕುತೂಹಲ ಹಾಗೂ ಅನುಮಾನ ಸೃಷ್ಟಿಸುತ್ತಿದೆ. ಅದು ಈ ಸಂದರ್ಭದಲ್ಲೇ ಏಕೆ? ಚಿತ್ರತಂಡ ಈ ಗಿಮಿಕ್ ಹಿಂದಿರುವ ಅಸಲಿಯತ್ತೇನು? ಎಂಬುದು ಸಿನಿಪ್ರಿಯರ ಪ್ರಶ್ನೆಯಾಗಿದೆ.

ದಿನಾಂಕ ನಿಗದಿ

ಇದೇ ನವೆಂಬರ್ 17, 2024ರಂದು 'ಪುಷ್ಪ 2' ಚಿತ್ರದ ಅಧಿಕೃತ ಟ್ರೇಲರ್ ಅಭಿಮಾನಿಗಳ ಮುಂದೆ ಹಾಜರಾಗಲು ಸಿದ್ಧವಾಗಿದೆ. ಇದರ ನಡುವೆಯೇ ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಲು ತಯಾರಕರು ನವೆಂಬರ್ 19, 2024ರಂದು ಅಮೆರಿಕಾದ ಚಿತ್ರಮಂದಿರಗಳಲ್ಲಿ 'ಪುಷ್ಪ ದಿ ರೈಸ್ ಭಾಗ 1' ಅನ್ನು ಮರು ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಇದು ವಿದೇಶಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಹೇಳಿರುವ ಚಿತ್ರತಂಡ, ತೆಲುಗು ರಾಜ್ಯಗಳಲ್ಲಿ ರೀ-ರಿಲೀಸ್ ಕುರಿತು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನುಸೂಯಾ ಭಾರದ್ವಾಜ್​, ಜಗದೀಶ್​, ಬ್ರಹ್ಮಾಜೀ, ಸುನಿಲ್, ಅಜಯ್ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).