ನ್ಯೂಸ್

ಬಿಎಂಟಿಸಿ ಬಸ್‌ನಲ್ಲಿ ಪರ್ಸ್ ಕಳವು; ಕುಪ್ಪಂ ಕಳ್ಳಿಯರ ಸೆರೆ

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಬಸ್‌ಗಳಲ್ಲಿ ಜನಸಂದಣಿ ಇದ್ದಾಗ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ಬ್ಯಾಗ್‌ನಲ್ಲಿನ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಕಳ್ಳಿಯರನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲೂಕಿನ ಲಾವಣ್ಯ ಮತ್ತು ಮೀನಾ ಬಂಧಿತರು. ಆರೋಪಿಗಳಿಂದ 899 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದು, 8 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಕೆ.ಆರ್. ಪುರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಊರಿಗೆ ಹೋಗಲು ಬಸ್‌ಗೆ ಕಾಯುತ್ತಿದ್ದಾಗ ಆಕೆಯ ಗಮನ ಬೇರೆಡೆ ಸೆಳೆದು 156 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೆ.ಆರ್. ಪುರ ಪೊಲೀಸರು ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿ ಮತ್ತು ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಬಲೆಬೀಸಿದ್ದರು. ಗಾಂಧಿನಗರದ ಸಾಯಿ ಯಾತ್ರಿ ನಿವಾಸ್ ಲಾಡ್ಜ್‌ನಲ್ಲಿ ಇಬ್ಬರು ಮಹಿಳೆಯರು ಇರುವುದಾಗಿ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲದೆ, ಕದ್ದ ಚಿನ್ನಾಭರಣವನ್ನು ತಿರಪ್ಪತ್ತೂರು ಕರೂರು ವೈಶ್ಯ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದರು.ಈ ಮೇರೆಗೆ ಆರೋಪಿಗಳನ್ನು ಕರೆದೊಯ್ದು ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿದ್ದ 855 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.