ಬೆಂಗಳೂರು: ಆಧುನಿಕತೆ, ಅಭಿವೃದ್ಧಿ, ತಂತ್ರಜ್ಞಾನದ ವೇಗದಲ್ಲಿ ನೆಲಮೂಲ ಸಂಸ್ಕೃತಿಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಇಂತಹ ತಳ ಸಂಸ್ಕೃತಿಗಳ ಜೀವದ್ರವ್ಯವನ್ನು ಕಾಪಿಡುವ ನಿಟ್ಟಿನಲ್ಲಿ ಸರ್ಕಾರ ದೊಡ್ಡಮಟ್ಟದ ಅಭಿಯಾನ ಆಯೋಜಿಸಲಿದೆ.
‘ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ’ ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಕಟ್ಟಕಡೆಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸಂಕಲ್ಪದ ಹಿನ್ನೆಲೆಯಲ್ಲಿ ಈ ಅಭಿಯಾನ ರೂಪುಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ಕುಮಾರ್ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಜಯವಾಣಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ನಾಡು-ನುಡಿ ವಿಷಯದಲ್ಲಿ ಸರ್ಕಾರದ ಆಲೋಚನೆಗಳು-ಯೋಜನೆಗಳನ್ನು ವಿವರಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ದಾಖಲೀಕರಣ ಹಾಗೂ ಅವುಗಳನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಡಿಸೆಂಬರ್ ಅಥವಾ 2023ರ ಜನವರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರಥ್ಯದಲ್ಲಿ ಅಭಿಯಾನ ಆರಂಭಗೊಳ್ಳಲಿದ್ದು, ಎರಡು ತಿಂಗಳು ನಡೆಯಲಿದೆ ಎಂದರು. ಗ್ರಾಮೀಣ ಭಾಗದ ಲಾವಣಿ, ಗೀಗಿ ಪದ ಮತ್ತಿತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಾಂಸ್ಕೃತಿಕ ಚಟುವಟಿಕೆಗಳು ಈ ಅಭಿಯಾನದ ಕೇಂದ್ರಬಿಂದುಗಳಾಗಲಿವೆ.
ಮೂಲ ಸಂಸ್ಕೃತಿ ರಕ್ಷಣೆಗೆ ಅಭಿಯಾನ: ನೆಲಮೂಲ ಸಾಂಸ್ಕೃತಿಕ ಚಟುವಟಿಕೆಗಳು ಕನ್ನಡಿಗರ ಬದುಕಿನ ಜೀವಾಳವೇ ಆಗಿವೆ. ಈ ಮೂಲ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಈ ಅಭಿಯಾನದ ಮೂಲಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಣ್ಣ ಸಣ್ಣ ಹಟ್ಟಿ, ಕಾಲನಿಯಲ್ಲಿರುವ ಕಲೆ, ಊರ ಹಬ್ಬ, ನಾಡ ಹಬ್ಬ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳು ಬೆಳಕಿಗೆ ಬರಬೇಕು. ಅವುಗಳು ದಾಖಲೀಕರಣಗೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸಬೇಕು ಎಂಬ ಉದ್ದೇಶದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಸುನೀಲ್ಕುಮಾರ್ ವಿವರಿಸಿದರು. ಈ ಅಭಿಯಾನಕ್ಕೆ ಪೂರಕವಾಗಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅದಕ್ಕಾಗಿ ಯೋಜನೆ ರೂಪುಗೊಳ್ಳುತ್ತಿದೆ ಎಂದು ಹೇಳಿದರು.
ಕಲಬುರಗಿ ಭಾಗದ ಸಾಂಸ್ಕೃತಿಕ ಚಟುವಟಿಕೆಗಳು ಕರಾವಳಿಗರಿಗೆ ಅರ್ಥವಾಗುವುದು ಕಷ್ಟ. ಅದೇ ರೀತಿ ಕರಾವಳಿಯ ಭಾಷೆ, ಸಾಂಸ್ಕೃತಿಕ ಚಟುವಟಿಕೆಗಳು ಬೇರೆ ಭಾಗದ ಜನರಿಗೆ ಮನದಟ್ಟಾಗುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಆಯಾ ಭಾಗದ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಲ್ಲಲ್ಲೇ ದಾಖಲೀಕರಿಸಿ, ಆಯಾ ಭಾಗದ ಜನರಲ್ಲಿ ಜೀವಂತವಾಗಿಡುವ ಕೆಲಸವನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದರು.
ಬಜೆಟ್ನಲ್ಲೇ ಅನುಮೋದನೆ: ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ಅಭಿಯಾನಕ್ಕೆ ಬಜೆಟ್ನಲ್ಲೇ ಅನುಮೋದನೆ ಪಡೆಯಲಾಗಿದೆ ಎಂದು ಸುನೀಲ್ಕುಮಾರ್ ತಿಳಿಸಿದರು.
ಯಕ್ಷಗಾನ ಸಮ್ಮೇಳನ: ಸಾಹಿತ್ಯ ಸಮ್ಮೇಳನದಂತೆಯೇ ಯಕ್ಷಗಾನ ಸಮ್ಮೇಳನ ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಜನವರಿಯಲ್ಲಿ ಉಡುಪಿಯಲ್ಲಿ ಈ ಸಮ್ಮೇಳನ ನಡೆಯಲಿದೆ. ಯಕ್ಷಗಾನ ಸಮ್ಮೇಳನವನ್ನು ಸರ್ಕಾರ ಬಜೆಟ್ನಲ್ಲೇ ಘೋಷಿಸಿದೆ. ಯಕ್ಷಗಾನವನ್ನು ಮತ್ತಷ್ಟು ಪ್ರಚುರಪಡಿಸಲು ಮತ್ತು ವಿಸ್ತರಣೆ ಮಾಡಲು ಇದರಿಂದ ಅನುಕೂಲವಾಗಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಯಕ್ಷಗಾನ ಅಕಾಡೆಮಿ ಈ ಕಾರ್ಯಕ್ರಮ ಆಯೋಜಿಸಲಿದೆ ಎಂದು ಸಚಿವ ವಿ. ಸುನೀಲ್ಕುಮಾರ್ ಹೇಳಿದರು.
ಕನ್ನಡ ಉಳಿವು ಒಬ್ಬರಿಂದ ಸಾಧ್ಯವಿಲ್ಲ. ಸರ್ಕಾರ, ಕನ್ನಡ-ಸಂಸ್ಕೃತಿ ಇಲಾಖೆ ಜತೆಗೆ ಎಲ್ಲ ಕನ್ನಡಿಗರು ಒಟ್ಟಿಗೆ ಹೆಜ್ಜೆ ಹಾಕಬೇಕು. ಕನ್ನಡೇತರರಿಗೆ ನಮ್ಮ ಭಾಷೆ ಕಲಿಸುವ ಜತೆಗೆ ಕನ್ನಡಿಗರು ತಮ್ಮ ಮನೆಗಳಲ್ಲಿ ಕನ್ನಡದ ಕಂಪನ್ನು ಹೆಚ್ಚಿಸುವ ವಾತಾವರಣ ಮೂಡಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಮಾತೃಭಾಷೆಗೆ ಆದ್ಯತೆ ನೀಡಿರುವುದರಿಂದ ಕನ್ನಡದ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ. | ವಿ.ಸುನೀಲ್ಕುಮಾರ್ ಕನ್ನಡ-ಸಂಸ್ಕೃತಿ ಸಚಿವ
ವಿಧೇಯಕ ಜಾರಿಗೆ ಪ್ರತ್ಯೇಕ ಸಮಿತಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಬಗ್ಗೆ ವ್ಯಾಪಕವಾದ ಚರ್ಚೆ ಆಗಬೇಕು. ವಿಧೇಯಕದ ಪ್ರಮುಖ ಉದ್ದೇಶ ಕನ್ನಡ ಉಳಿವು. ಹಾಗಾಗಿ ಇದರಲ್ಲಿ ಯಾರನ್ನೋ ಕೈಬಿಡಬೇಕು, ಇನ್ಯಾರನ್ನೋ ಸೇರಿಸಬೇಕು ಎಂಬ ಪ್ರಶ್ನೆಯೇ ಇಲ್ಲ. 2023ಕ್ಕೆ ವಿಧೇಯಕ ಜಾರಿಯಾಗಲಿದೆ. ಇದರ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದರು.
ಕರ್ನಾಟಕ ಪಬ್ಲಿಕ್ ಶಾಲೆ: ಕನ್ನಡ ಶಾಲೆ ಉಳಿವಿಗೆ ಸರ್ಕಾರ ಕ್ರಮ ವಹಿಸಿದೆ. ಪಂಚಾಯಿತಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲು ಉದ್ದೇಶಿಸಲಾಗಿದೆ. ಈಗಾಗಲೇ ನಮ್ಮ ತಾಲೂಕಿನಲ್ಲಿ ಮೂರು ಶಾಲೆಗಳು ಆರಂಭವಾಗಿವೆ. ಇಲ್ಲಿ ಸಂಗೀತ, ಚಿತ್ರಕಲೆ ಸೇರಿ ಇತರೆ ಶಿಕ್ಷಕರ ನೇಮಕಕ್ಕೂ ಕ್ರಮ ವಹಿ ಸಲಾಗಿದೆ. ಸರ್ಕಾರದ ಜೊತೆಗೆ ಜನರೂ ಕೈಜೋಡಿಸಬೇಕು.