- ತಾಂತ್ರಿಕ ದೋಷವಲ್ಲ, ಪ್ರಯಾಣಿಕನ ಮೆಟಲ್ ಚೈನ್‌ನಿಂದಲೇ ಮೆಟ್ರೋ ಸಂಚಾರ ವ್ಯತ್ಯಯ
- ವೈರಲ್ ಆದ ಮೆಟ್ರೋ ಅವಾಂತರಕ್ಕೆ ಬಂತು ಸ್ಪಷ್ಟನೆ; ಬಾಗಿಲಲ್ಲಿ ಸಿಲುಕಿದ್ದ ವಸ್ತುವೇ ಕಾರಣ
- ನೇರಳೆ ಮಾರ್ಗದಲ್ಲಿ ಮತ್ತೆ ಸಂಚಾರ ಅಸ್ತವ್ಯಸ್ತ; ಕಾರಣ ವಿವರಿಸಿದ ಬಿಎಂಆರ್‌ಸಿಎಲ್
ಬೆಂಗಳೂರು: ನೇರಳೆ (Purple) ಮಾರ್ಗದಲ್ಲಿ ಗುರುವಾರ ಸಂಜೆ ಮತ್ತೆ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ ಬೆನ್ನಲ್ಲೇ, ಘಟನೆಯ ಪ್ರಾಥಮಿಕ ತನಿಖಾ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬಿಡುಗಡೆ ಮಾಡಿದೆ. ತಾಂತ್ರಿಕ ದೋಷದಿಂದಲ್ಲ, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಮಾರ್ಗದಲ್ಲಿ ಸಿಲುಕಿದ್ದೇ ಸಮಸ್ಯೆಗೆ ಕಾರಣ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಮೆಟಲ್ ಚೈನ್ ಸಿಲುಕಿ ಬಾಗಿಲು ಮುಚ್ಚಲಿಲ್ಲ
ಬಿಎಂಆರ್‌ಸಿಎಲ್ ಪ್ರಕಟಣೆಯ ಪ್ರಕಾರ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ತನಿಖೆ ನಡೆಸಿವೆ. ತನಿಖೆಯಲ್ಲಿ ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್‌ವೇನಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಬಾಗಿಲು ಸರಿಯಾಗಿ ಮುಚ್ಚಿಕೊಳ್ಳಲಿಲ್ಲ. ಪರಿಣಾಮವಾಗಿ ಸಂಜೆ 7.36ರಿಂದ 7.54ರವರೆಗೆ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಯಿತು ಎಂದು ತಿಳಿಸಿದೆ.
ತಾಂತ್ರಿಕ ದೋಷ ಇಲ್ಲ
ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ ಬಳಿಕವೇ ರೈಲನ್ನು ಮತ್ತೆ ಸೇವೆಗೆ ಬಿಡಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್‌ಸಿಎಲ್ ಅತ್ಯುನ್ನತ ಆದ್ಯತೆ ನೀಡುತ್ತದೆ. ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಮೆಟ್ರೋ ಸೇವೆ ನೀಡುವ ಬದ್ಧತೆ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುರಕ್ಷತಾ ಆಡಿಟ್‌ಗೆ ತೇಜಸ್ವಿ ಸೂರ್ಯ ಪತ್ರ
ಇತ್ತೀಚಿನ ಮೆಟ್ರೋ ಅವಾಂತರಗಳ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ಸಮಗ್ರ ಸುರಕ್ಷತಾ ಆಡಿಟ್ ನಡೆಸುವಂತೆ ಆಗ್ರಹಿಸಿದ್ದಾರೆ.
ಜೂನ್ 25ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದಿರುವ ಸಂಸದ ತೇಜಸ್ವಿ ಸೂರ್ಯ, ಜೂನ್ 23ರಂದು ಕರೆಂಟ್ ಕಲೆಕ್ಟರ್ ಡಿವೈಸ್ (CCD) ದೋಷದಿಂದ ಮೆಟ್ರೋ ಸೇವೆ ಸ್ಥಗಿತಗೊಂಡ ಘಟನೆ ಸೇರಿದಂತೆ ಕಳೆದ ಒಂದೂವರೆ ವರ್ಷದಲ್ಲಿ ಬೆಂಗಳೂರು ಮೆಟ್ರೋದಲ್ಲಿ ಸುಮಾರು 20 ತಾಂತ್ರಿಕ ದೋಷಗಳು ಮತ್ತು ಸೇವಾ ವ್ಯತ್ಯಯಗಳು ಸಂಭವಿಸಿವೆ ಎಂದು ಉಲ್ಲೇಖಿಸಿದ್ದಾರೆ. ನೇರಳೆ ಮಾರ್ಗದಲ್ಲೇ ಅತಿ ಹೆಚ್ಚು ಸಮಸ್ಯೆಗಳು ವರದಿಯಾಗಿದ್ದು, ಟಿಕೆಟ್ ವ್ಯವಸ್ಥೆ, ಸಿಗ್ನಲ್ ದೋಷ ಹಾಗೂ ಹಳಿ ಸಮಸ್ಯೆಗಳು ವ್ಯವಸ್ಥೆಯಲ್ಲಿನ ಲೋಪಗಳನ್ನು ತೋರಿಸುತ್ತವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ವರದಿ ಸಲ್ಲಿಸುವಂತೆ ಮನವಿ
ಬೆಂಗಳೂರು ಮೆಟ್ರೋ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಬಗ್ಗೆ ಸಮಗ್ರ ಸುರಕ್ಷತಾ ಮತ್ತು ನಿರ್ವಹಣಾ ಆಡಿಟ್ ನಡೆಸುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು. ಅಲ್ಲದೆ, ಕೈಗೊಂಡ ಕ್ರಮಗಳ ಕುರಿತು ವಿವರವಾದ ಆಕ್ಷನ್ ಟೇಕನ್ ರಿಪೋರ್ಟ್ (ATR) ಪಡೆದು ಅದರ ಮೇಲ್ವಿಚಾರಣೆ ನಡೆಸುವಂತೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.