ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಓಟ್ ಶೇರಿಂಗ್ ಹೆಚ್ಚಳಕ್ಕೆ ಕೈ ಹಾಕಿರುವ ಕಾಂಗ್ರೆಸ್ ಅನ್ಯ ಪಕ್ಷದವರಿಗೆ ಗಾಳ ಹಾಕುತ್ತಿರುವ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪ್ರತಿ ರಾಜಕೀಯ ನಾಯಕರ ಭೇಟಿಯೂ ಸಾಕಷ್ಟು ಚರ್ಚೆಯಾಗುತ್ತಿದ್ದು, ಅವರು ತಮ್ಮ ಭೇಟಿಗೆ ಸ್ಪಷ್ಟನೆ ನೀಡುವ ಸಂದರ್ಭ ಎದುರಾಗುತ್ತಿದೆ.
ಬಿಜೆಪಿ ನಾಯಕಿ ತೇಜಸ್ವಿನಿ ಅನಂತ ಕುಮಾರ್ ಭೇಟಿಯ ಕುರಿತು ಊಹಾಪೋಹ ಎದ್ದ ಬೆನ್ನಲ್ಲೇ ಬುಧವಾರ ಹಿರಿಯೂರಿನ ಮಾಜಿ ಶಾಸಕಿ ಬಿಜೆಪಿಯ ಪೂರ್ಣಿಮಾ ಮನೆಗೆ ಡಿಕೆಶಿ ಭೇಟಿಕೊಟ್ಟಿದ್ದಾರೆ. ಈ ಭೇಟಿಯೂ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಇವತ್ತು ಕೃಷ್ಣ ಜನ್ಮಾಷ್ಟಮಿ ಹಬ್ಬ, ನಮ್ಮ ಸಹೋದರಿ ಮನೆಗೆ ಬಂದಿದ್ದೆ. ಕೃಷ್ಣಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು ಅವರ ಮಗಳು ಪೂರ್ಣಿಮಾ ಊಟಕ್ಕೆ ಕರೆದಿದ್ದರು, ಊಟ ಮಾಡಿದೆ. ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ. ಸಹಕಾರದ ಸರ್ಕಾರ ನಾವು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದರು.
ನಂತರ ಮಾತನಾಡಿದ ಪೂರ್ಣಿಮಾ, ಡಿ.ಕೆ ಶಿವಕುಮಾರ್ ಅವರು ನಮ್ಮ ಮನಗೆ ಬಂದಿದ್ದರು. ಹಬ್ಬದ ಕಾರಣಕ್ಕೆ ಬಂದು ಊಟ ಮಾಡಿ ಹೋದರು. ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇದೆ. ಆದರೆ ನಾನು ಬಿಜೆಪಿಯಲ್ಲಿ ಇದ್ದೇನೆ, ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ ಎಂದರು.
ಚುನಾವಣೆಗೂ ಮುಂಚಿತವಾಗಿ ಈ ಚರ್ಚೆ ಇತ್ತು. ಆದರೆ ನಾನು ಎಲ್ಲಿಯೂ ಹೇಳಲಿಲ್ಲ ಬಿಜೆಪಿ ಬಿಡುತ್ತೇನೆ ಎಂದು. ಈಗಲೂ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಹೋಗುವುದಾದರೆ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಕದ್ದು ಮುಚ್ಚಿ ನಾನು ಕಾಂಗ್ರೆಸ್ ಸೇರಲ್ಲ ಎಂದು ಹೇಳಿದರು.
ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನನಗೆ ಯಾವುದೇ ಅಸಮಾಧಾನ ಇಲ್ಲ. ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.