ನ್ಯೂಸ್

ಸಂಪಾದಕೀಯ| ಕೆಪಿಎಸ್​ಸಿಯನ್ನು ಸಮಗ್ರವಾಗಿ ಶುದ್ಧೀಕರಣ ಮಾಡಬೇಕಾದ ಅಗತ್ಯವಿದೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕರ್ನಾಟಕ ಲೋಕಸೇವಾ ಆಯೋಗದ ಎಡವಟ್ಟುಗಳಿಗೆ, ಅಕ್ರಮಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ಪಾರದರ್ಶಕತೆ, ದಕ್ಷ ಆಡಳಿತಕ್ಕೆ ಮಾದರಿ ಆಗಬೇಕಾದ ಇಂಥ ಸಂಸ್ಥೆಗಳೇ ಅವ್ಯವಹಾರ, ಭ್ರಷ್ಟಾಚಾರದ ಕೇಂದ್ರಗಳಾಗಿ ಮಾರ್ಪಡುಟ್ಟಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಎಫ್​ಡಿಎ ಪ್ರಶ್ನೆಪತ್ರಿಕೆ ಬಹಿರಂಗವಾದ ಪ್ರಕರಣದಿಂದ ಕೆಪಿಎಸ್​ಸಿಯಲ್ಲಿನ ಹಲವು ಹುಳುಕುಗಳು ಹೊರಬಿದ್ದಿವೆ. ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಸ್ವಹಿತಾಸಕ್ತಿ, ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿರುವುದರಿಂದ ಕೆಪಿಎಸ್​ಸಿ ಸ್ಥಾಪನೆಯ ಮೂಲೋದ್ದೇಶವೇ ಮೂಲೆಗುಂಪಾಗಿದೆ. ಸರ್ಕಾರಿ ಉದ್ಯೋಗ ಪಡೆಯಬೇಕೇಂಬ ಕನಸು ಹೊತ್ತ ಲಕ್ಷಾಂತರ ಅಭ್ಯರ್ಥಿಗಳು ನಿರಾಸೆ ಅನುಭವಿಸುವಂತಾಗಿದೆ. ಅಷ್ಟಕ್ಕೂ, ಕೆಪಿಎಸ್​ಸಿ ವಿವಾದ, ಅವ್ಯವಹಾರಗಳಿಂದ ಸುದ್ದಿಯಾಗಿರುವುದು ಇದೇ ಮೊದಲೇನಲ್ಲ. ಪ್ರತಿ ಬಾರಿಯೂ ಇಂಥ ಘಟನೆಗಳು ನಡೆದಾಗ ತನಿಖೆ, ಕ್ರಮ ಕೈಗೊಳ್ಳುವ ಮಾತು ಒಂದಿಷ್ಟು ಸಮಯ ಚಾಲ್ತಿಯಲ್ಲಿರುತ್ತದೆ. ಬಳಿಕ ಮತ್ತೆ ಅದೇ ಪರಿಸ್ಥಿತಿ. ಹಾಗಾಗಿ, ಬರೀ ತೋರಿಕೆಯ ಕ್ರಮಗಳನ್ನು ಕೈಗೊಳ್ಳದೆ ಕೆಪಿಎಸ್​ಸಿಯನ್ನು ಸಮಗ್ರವಾಗಿ ಶುದ್ಧೀಕರಣ ಮಾಡಬೇಕಾದ ಅಗತ್ಯವಿದೆ.

ಅಲ್ಲಿನ ಇಡೀ ವ್ಯವಸ್ಥೆ ಶುದ್ಧೀಕರಣ ಆದಾಗ ಮಾತ್ರ ಹಳೆಯ ಸಮಸ್ಯೆಗಳನ್ನು ಬೇರುಸಮೇತ ಕಿತ್ತೊಗೆಯಲು ಸಾಧ್ಯ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾನುವಾರವೇ ಮೂವರು ಸರ್ಕಾರಿ ಅಧಿಕಾರಿಗಳು ಸೇರಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಸೋಮವಾರ ಮಹಿಳಾ ಸ್ಟೆನೋಗ್ರಾಫರ್ ಬಂಧನವಾಗಿದೆ. ಈಕೆಗೆ ಪ್ರಶ್ನೆಪತ್ರಿಕೆ ತಯಾರಾಗುವ ಸ್ಥಳಕ್ಕೆ ತೆರಳಲು ಪ್ರವೇಶವಿತ್ತು. ಅವಳು ಅದನ್ನು ದುರುಪಯೋಗ ಮಾಡಿಕೊಂಡಿದ್ದು, ಪ್ರಮುಖ ಆರೋಪಿ ರಮೇಶ್​ಗೆ ಪ್ರಶ್ನೆಪತ್ರಿಕೆ ಕೊಟ್ಟು ಸೋರಿಕೆ ಮಾಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಂದರೆ, ಕೆಪಿಎಸ್​ಸಿ ಸಿಬ್ಬಂದಿಯೇ ಇಂಥ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಸ್ಪಷ್ಟ. ತನಿಖೆ, ಕಾನೂನಿನ ಕ್ರಮ, ಅದರಂತೆ ತಪ್ಪಿತಸ್ಥರಿಗೆ ಶಿಕ್ಷೆ ಇದೆಲ್ಲ ನಡೆಯಲೇ ಬೇಕು. ಆದರೆ, ಇಲ್ಲಿ ಸರ್ಕಾರಿ ಸಿಬ್ಬಂದಿಯ ನೈತಿಕತೆಯ ಪ್ರಶ್ನೆ ಇದೆ. ಯಾವುದೇ ಸಂಸ್ಥೆ, ಇಲಾಖೆ, ವಿಭಾಗ ಸಮರ್ಪಕವಾಗಿ ನಡೆಯುವುದು ಅಲ್ಲಿನ ಸಿಬ್ಬಂದಿಯ ವಿಶ್ವಾಸಾರ್ಹ ಹಾಗೂ ಪಾರದರ್ಶಕ ಕಾರ್ಯದಿಂದ. ಆದರೆ, ಕೆಪಿಎಸ್​ಸಿಯಲ್ಲಿ ಬೇಲಿಯೇ ಎದ್ದು ಹೋಲ ಮೇಯ್ದಂಥ ಸ್ಥಿತಿ ಸೃಷ್ಟಿ ಆಗಿದೆ.

ಸರ್ಕಾರಿ ಸಿಬ್ಬಂದಿ ಸೇರಿ ಎಲ್ಲ ಬಗೆಯ ಉದ್ಯೋಗಿಗಳು ನೈತಿಕತೆಯ ಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ತಾವು ಕೆಲಸ ಮಾಡುವ ಸ್ಥಳ, ಸಂಸ್ಥೆಯ ವರ್ಚಸ್ಸನ್ನು ಹೆಚ್ಚಿಸಬೇಕೆ ಹೊರತು ಅದನ್ನು ಹಾಳು ಮಾಡುವ ಕೆಲಸ ಆಗಬಾರದು. ಕೆಪಿಎಸ್​ಸಿ ಸುಧಾರಣೆ ನಿಟ್ಟಿನಲ್ಲಿ ಹೋಟಾ ಸಮಿತಿ 2017ರಲ್ಲಿ ವರದಿ ನೀಡಿದ್ದು, ಮೊದಲ ಆದ್ಯತೆಯಾಗಿ ಸಿಬ್ಬಂದಿಯನ್ನು ಬದಲಿಸಿ, ವ್ಯವಸ್ಥೆ ಸ್ವಚ್ಛಗೊಳಿಸಬೇಕು. ಈ ನಿಟ್ಟಿನಲ್ಲಿ ಖುದ್ದು ಮುಖ್ಯ ಕಾರ್ಯದರ್ಶಿ ಗಮನ ವಹಿಸಬೇಕು ಎಂದು ಹೇಳಿದೆ. ಅಲ್ಲದೆ, ಪರೀಕ್ಷಾ ವ್ಯವಸ್ಥೆಯನ್ನು ಹೈಟೆಕ್​ಗೊಳಿಸುವ ಅಗತ್ಯವನ್ನೂ ಪ್ರತಿಪಾದಿಸಿದೆ. ಇನ್ನಾದರೂ, ಈ ಸಮಿತಿ ವರದಿ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿ.