ನ್ಯೂಸ್

ಕರ್ಫ್ಯೂ ನಡುವೆ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ

ನವದೆಹಲಿ: ಒಡಿಶಾದ ಪುರಿಯಲ್ಲಿ ಆಯೋಜನೆಗೊಳ್ಳುವ ವಿಶ್ವಪ್ರಸಿದ್ಧ ಜಗನ್ನಾಥ ಪುರಿ ರಥಯಾತ್ರೆ ಆರಂಭವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ನಿಷೇಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ, ರಥಯಾತ್ರೆ ಸಾಂಗೋಪಾಂಗವಾಗಿ ಸಾಗುತ್ತಿದೆ.

ಸಾಮಾನ್ಯವಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು, ದೇಶ-ವಿದೇಶದ ಪ್ರವಾಸಿಗರು ಪ್ರತಿ ವರ್ಷ ರಥಯಾತ್ರೆಗೆ ಸಾಕ್ಷಿಯಾಗುತ್ತಿದ್ದರು. ಆದರೆ, ಈ ಬಾರಿ ಕೋವಿಡ್​ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಹಲವು ನಿರ್ಬಂಧಗಳನ್ನು ವಿಧಿಸಿ ಜಗನ್ನಾಥಯಾತ್ರೆಯ ವಿಧಿವಿಧಾನಗಳನ್ನು ಪೂರೈಸಲು ಸುಪ್ರೀಂಕೋರ್ಟ್​ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಥಯಾತ್ರೆ ಆರಂಭವಾಗಿದೆ.

ಸುಪ್ರೀಂಕೋರ್ಟ್​ ಸೂಚನೆಯ ಮೇರೆಗೆ ಒಡಿಶಾ ಸರ್ಕಾರ ಪುರಿಯಲ್ಲಿ 41 ಗಂಟೆಗಳ ಕೋವಿಡ್​ ಕರ್ಫ್ಯೂ ಜಾರಿಗೊಳಿಸಿದೆ. ಅಲ್ಲದೆ, ರಥಯಾತ್ರೆಯಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ 700 ಪುರೋಹಿತರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಿ, ಯಾವುದೇ ಸೋಂಕು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದೆ. ಆನಂತರದಲ್ಲಷ್ಟೇ ಅವರಿಗೆ ಜಗನ್ನಾಥ, ಬಲಭದ್ರ ಮತ್ತು ಸುಭದ್ರರ ತ್ರಿವಳಿ ರಥಗಳನ್ನು ಎಳೆಯುವ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.