ಬೆಂಗಳೂರು: ತೆರಿಗೆ ವಂಚನೆ ಉದ್ದೇಶದಿಂದ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಓಡಾಡುತ್ತಿದ್ದ ಡಸ್ಟರ್ ಕಾರನ್ನು ಆರ್ಟಿಒ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ವಾಹನ ಖರೀದಿ ದಾಖಲೆ ಒದಗಿಸುವಂತೆ ಮಾಲೀಕರಿಗೆ ನೋಟಿಸ್ ಕೊಟ್ಟಿದ್ದಾರೆ.
ಅನ್ನಪೂರ್ಣೆಶ್ವರಿನಗರದ ಡಿ. ಸತೀಶ್ಕುಮಾರ್ ಎಂಬುವರಿಗೆ ಸೇರಿದ ಕೆಎ-01 ಎಫ್ಎನ್-6223 ಸಂಖ್ಯೆಯ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಪಂಜಾಬ್ನಿಂದ ವಾಹನವನ್ನು ಬೆಂಗಳೂರಿಗೆ ತರಲಾಗಿದೆ. ತೆರಿಗೆ ಪಾವತಿ ಮೊತ್ತ ಹೆಚ್ಚಿದೆ. ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನ ಸೂಚನೆಯಂತೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಓಡಾಡುತ್ತಿದ್ದುದ್ದಾಗಿ ಮಾಲೀಕ ಹೇಳಿರುವುದಾಗಿ ಆರ್ಟಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ಪಂಜಾಬ್ನಲ್ಲಿ ಪಿಪಿ-01-ಎಫ್ಎನ್-6223 ಎಂದು ನೋಂದಣಿಯಾಗಿದೆ. ಪೊಲೀಸರು ಹಾಗೂ ಆರ್ಟಿಒ ಅಧಿಕಾರಿಗಳಿಗೆ ಅನುಮಾನ ಬಾರದಿರಲಿ ಎಂದು ಪಿಪಿ ಜಾಗದಲ್ಲಿ ಕೆಎ ಎಂದು ನಮೂದಿಸಿದ್ದ. ಗುರುವಾರ ಬೆಳಗ್ಗೆ ಯಶವಂತಪುರ ಆರ್ಟಿಒದ ಹಿರಿಯ ಇನ್ಸ್ಪೆಕ್ಟರ್ ರಾಜಣ್ಣ ಅನ್ನಪೂರ್ಣೆಶ್ವರಿನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು ಆರ್ಟಿಒ ವ್ಯಾಪ್ತಿಯಲ್ಲಿ ಎಫ್ಎನ್ ಸೀರಿಸ್ ಸಂಖ್ಯೆಯೇ ಇಲ್ಲ. ಹೀಗಾಗಿ ಎಫ್ಎನ್ ಸೀರಿಸ್ನ ಡಸ್ಟರ್ ವಾಹನ ಗಮನಿಸಿದ ರಾಜಣ್ಣ, ಮಾಲೀಕನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ವಾಹನವನ್ನು ಜಪ್ತಿ ಮಾಡಿ ದಾಖಲೆ ತರುವಂತೆ ಸೂಚಿಸಲಾಗಿದೆ. ಮಾಲೀಕ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದರಿಂದ ಶಬರಿಮಲೆಯಿಂದ ವಾಪಸ್ ಬಂದು ದಾಖಲೆ ಒದಗಿಸುವುದಾಗಿ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.