ನ್ಯೂಸ್

Sheeshmahal ಬಂಗಲೆ ವಿವಾದ; ಪ್ರಧಾನಿ ಮೋದಿ ನಿವಾಸದ ಬೆಲೆ ಎಷ್ಟು..?: ಪಂಜಾಬ್​ ಸಿಎಂ ಭಗವಂತ್​ ಮಾನ್​ ಪ್ರಶ್ನೆ!

Chandigarh: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಚಂಡೀಗಢದಲ್ಲಿ ಅತಿ ಐಷಾರಾಮಿ " ಶೀಷ್ ಮಹಲ್​"(Sheeshmahal) ಬಂಗಲೆಯನ್ನು ನೀಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಳ್ಳಿಹಾಕಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದಿದೆ.

ಸದ್ಯ ಚರ್ಚಾ ವಿಷಯವಾಗಿರುವ ಮನೆ ಮುಖ್ಯಮಂತ್ರಿಗಳ ಅಧಿಕೃತ ಅತಿಥಿ ಗೃಹವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಗುಜರಾತ್‌ನಲ್ಲಿ ಆಮ್​ ಆದ್ಮಿ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿರುವುದರಿಂದ ಅವರು ಈ ಮಟ್ಟಕ್ಕೆ ಇಳಿದಿದ್ದಾರೆ, ಪಂಜಾಬ್​ ಜನರು ಅವರ ಮಾತುಗಳನ್ನು ನಂಬಬೇಡಿ, ಬಿಜೆಪಿಯ ಕಪೋಲಕಲ್ಪಿತ ಹೇಳಿಕೆಗಳಿಂದ ನಮ್ಮ ಸರ್ಕಾರವನ್ನು ಕೆಣಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

50 ನಂಬರ್​​ ಬಂಗಲೆಯನ್ನು ಅರವಿಂದ್ ಕೇಜ್ರಿವಾಲ್ ಅವರು ವಾಸಿಸುತ್ತಿರುವ ಶೀಷ್ ಮಹಲ್​ ಆಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ . ಮನೆ ಸಂಖ್ಯೆ 45 ಮುಖ್ಯಮಂತ್ರಿಯ ಅಧಿಕೃತ ನಿವಾಸವಾಗಿದೆ, ಆದರೆ ಮನೆ ಸಂಖ್ಯೆ 50 ಸಿಎಂ ಅವರ ಕ್ಯಾಂಪ್ ಆಫೀಸ್ ಮತ್ತು ಅತಿಥಿ ಗೃಹವಾಗಿದೆ ಎಂದು ದಾಖಲೆಗಳೊಂದಿಗೆ ಸ್ಪಷ್ಟಪಡಿಸಲು ನಾನು ಬಯಸುತ್ತೇನೆ" ಎಂದು ಮಾನ್ ವೀಡಿಯೊ ಭಾಷಣದಲ್ಲಿ ಹೇಳಿದರು. ನನ್ನ ಯಾವುದೇ ಅತಿಥಿಗಳು ಅಥವಾ ಸಂದರ್ಶಕರನ್ನು ಮನೆ ಸಂಖ್ಯೆ 50 ರಲ್ಲಿ ಭೇಟಿ ಮಾಡಬಹುದು ಮತ್ತು ಅಲ್ಲಿಯೇ ತಂಗಬಹುದು. ಕೇಜ್ರಿವಾಲ್ ಸಾಹಿಬ್ ಪಂಜಾಬ್‌ಗೆ ಭೇಟಿ ನೀಡಿದಾಗ ಕೆಲವೊಮ್ಮೆ ಅಲ್ಲಿಯೇ ಇರುತ್ತಾರೆ. ಇನ್ನೂ ಅನೇಕರು ಅಲ್ಲಿಯೇ ತಂಗಿದ್ದಾರೆ, ಗಣ್ಯರು ಮತ್ತು ಅಧಿಕಾರಿಗಳಿಗೆ ಆತಿಥ್ಯ ವಹಿಸಲು ಬಹಳ ಹಿಂದಿನಿಂದಲೂ ಆ ಮನೆಯನ್ನು ಬಳಸಲಾಗುತ್ತಿದೆ ಎಂದರು.

ಬಿಜೆಪಿಗೆ ಪಂಜಾಬ್ ಬಗ್ಗೆ ಯಾವುದೇ ಕಾರ್ಯಸೂಚಿ ಇಲ್ಲ. ಅವರು ಇಲ್ಲಿನ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಲು ಸಾಧ್ಯವಾಗದ ಕಾರಣ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ ಮತ್ತು ತಮ್ಮ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪಂಜಾಬ್​ ವಿಪಕ್ಷ ನಾಯಕರ ಮೇಲೆಯೂ ಹರಿಹಾಯ್ದ ಮಾನ್​, ಅವರು ನಿಜವಾದ ಶೀಷ್ ಮಹಲ್​ ನೋಡಲು ಬಯಸಿದರೆ , ಸಿಸ್ವಾನ್‌ನಲ್ಲಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನೆಗೆ ಅಥವಾ ಸುಖಬೀರ್ ಬಾದಲ್ ಅವರ ಸುಖ್ ವಿಲಾಸ್ ರೆಸಾರ್ಟ್‌ಗೆ ಭೇಟಿ ನೀಡಬೇಕು. ಅವುಗಳು ನಿಜವಾದ ಅರಮನೆಗಳು ಎಂದರು.

ಈ ಹಿಂದೆ ಕ್ಯಾಪ್ಟನ್ ಅಮರಿಂದರ್ ಅವರ ಗೆಳತಿ ಅರೂಸಾ ಸಿಎಂ ಮನೆಯಲ್ಲಿ ವಾಸಿಸುತ್ತಿದ್ದರು. ಅದು ಕೂಡ ಶೀಷ್ ಮಹಲ್​ ಆಗಿತ್ತೇ ? ಮಾಜಿ ಅಡ್ವೊಕೇಟ್ ಜನರಲ್ ಅತುಲ್ ನಂದಾ ಕೂಡ ಮನೆ ಸಂಖ್ಯೆ 50 ರಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು. ಬಿಜೆಪಿ ಸಂಸದ ರವನೀತ್ ಬಿಟ್ಟು ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಮಾನ್​, ರವನೀತ್​ ತಮ್ಮ ಸರ್ಕಾರಿ ವಸತಿ ಗೃಹವನ್ನು ಖಾಲಿ ಮಾಡಿಲ್ಲ, ಅಂತಹವರು ನನ್ನ ಅತಿಥಿ ಗೃಹವನ್ನು ಶೀಷ್ ಮಹಲ್​ ಎಂದು ಕರೆಯುತ್ತಾರೆ, ಮುಂದೊಂದು ದಿನ ನಮ್ಮ ಕಾರುಗಳನ್ನು ಐಷಾರಾಮಿ ವಾಹನಗಳು ಎಂದು ಕರೆದರೂ ಅಚ್ಚರಿಪಡಬೇಕಿಲ್ಲ ಎಂದರು.

ನಮ್ಮನ್ನು ಜನರು ಆಯ್ಕೆ ಮಾಡಿದ್ದಾರೆ, ಈ ಮನೆಗಳು ಸಾರ್ವಜನಿಕರಿಗೆ ಸೇರಿವೆ. ಒಬ್ಬ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿಯಾಗಿ ಸಿಎಂ ಮನೆಯಲ್ಲಿ ವಾಸಿಸಿದರೆ, ಅದನ್ನು ಶೀಷ್ ಮಹಲ್​ ಎಂದು ಕರೆಯುತ್ತಾರೆ . ಪ್ರಧಾನಿ ನಿವಾಸದ ಬೆಲೆ ಎಷ್ಟು?" ಎಂದು ಮಾನ್​ ಪ್ರಶ್ನಿಸಿದ್ದಾರೆ.(ಏಜೆನ್ಸೀಸ್​)