ಬೆಂಗಳೂರು : ಎರಡು ಗುಂಪುಗಳ ನಡುವಿನ ಗಲಾಟೆ ಸಂಬಂಧ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳು ಕಠಿಣ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡದ ಆದೇಶವನ್ನು ಹೈಕೋರ್ಟ್ ಕಾಯಂಗೊಳಿಸಿ ಆದೇಶಿಸಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸೋಮಶೇಖರ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಸೋಮಶೇಖರ್ ತಪ್ಪಿಸಿಕೊಂಡಿದ್ದಾಗ ಆತನ ವಿರುದ್ಧ ಯಾವುದೇ ಆರೋಪ ಇರಲಿಲ್ಲ. ಒಂದೇ ಘಟನೆಯ ಬಗ್ಗೆ ಅವರಿಗೆ ಎರಡು ವಿಚಾರಣೆಗಳನ್ನು ಎದುರಿಸಬೇಕಾಗಿತ್ತು ಎಂದರು.
ಸರ್ಕಾರಿ ಪರ ವಕೀಲರು, ಭಾರತೀಯ ದಂಡ ಸಂಹಿತೆ ಸೆಕ್ಷನ್ 224 ಹೇರಿರುವುದನ್ನು ಸಮರ್ಥಿಸಿಕೊಂಡು, ಬೇರೆ ಪ್ರಕರಣಗಳು ಬೇರೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದವುಗಳು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಕೆಲ ಕಾಲ ವಾದ ಪ್ರತಿವಾದ ಆಲಿಸದ ನ್ಯಾಯಪೀಠ ಅರ್ಜಿದಾರರು ಉದ್ದೇಶಪೂರ್ವಕವಾಗಿ ಎಎಸ್‌ಐ ನನ್ನು ತಳ್ಳಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಪ್ರಾಸಿಕ್ಯೂಷನ್ ಸಾಕ್ಷಿಗಳೂ ಸಹ ದೃಢೀಕರಿಸಿದ್ದಾರೆ. ಹಾಗಾಗಿ ಶಿಕ್ಷೆ ರದ್ದುಗೊಳಿಸಲಾಗದು ಎಂದು ಆದೇಶಿಸಿದೆ.
ಅಲ್ಲದೆ, ಅಪರಾಧ ಎಸಗುವ ಸಂಭವನೀಯತೆ ಇದೆ ಎಂದು ಪೊಲೀಸರು ಮ್ಯಾಜಿಸ್ಟ್ರೇಟ್ ಅದೇಶ ಅಥವಾ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು. ಹಾಗಾಗಿ ಶಿಕ್ಷೆ ಕಡಿತಗೊಳಿಸಲು ಸಾಧ್ಯವಿಲ್ಲ, ಆರೋಪಿ ಶಿಕ್ಷೆಯನ್ನು ಎದುರಿಸಲೇಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ )
2012ರ ಏ.7ರಂದು ರಾತ್ರಿ ಹೊಸಹುಡ್ಯ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಆಗ ಸಹಾಯಕ ಸಬ್ ಇನ್ಸಪೆಕ್ಟರ್ ಸಾದಪ್ಪ ಮತ್ತಿತರ ಪೊಲೀಸರು ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಸೋಮಶೇಖರ್ ಮತ್ತು ವೆಂಕಟೇಶ್ ಅವರನ್ನು ಬಂಧಿಸಿ ಅವರ ವಿರುದ್ಧ ಕೊಲೆ ಯತ್ನ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಅವರನ್ನು ಪಾತಪಾಳ್ಯ ಪೊಲೀಸ್ ಠಾಣೆಗೆ ಕರೆತಂದಾಗ ಜೀಪಿನಲ್ಲಿ ಕೆಳಗೆ ಇಳಿಯುವಾಗ ಸೋಮಶೇಖರ್,ಸಾದಪ್ಪನನ್ನು ತಳ್ಳಿ ತಪ್ಪಿಸಿಕೊಂಡು ಓಡಿಬಿಟ್ಟಿದ್ದನು. ಬಳಿಕ ಹುಡುಕಿದರೂ ಸಿಗದ ಕಾರಣ ಆತನ ಮೇಲೆ ದೂರು ದಾಖಲಿಸಿಕೊಳ್ಳಲಾಗಿತ್ತು.
ಆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಬಾಗೇಪಲ್ಲಿ ಜೆಎಂಎಫ್ ಸಿ ನ್ಯಾಯಾಲಯ 2014ರ ಜೂ.9ರಂದು ಕಾನೂನು ಬದ್ಧ ಬಂಧನದಿಂದ ಆರೋಪಿ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಆತನಿಗೆ 6 ತಿಂಗಳು ಕಠಿಣ ಜೈಲು ಮತ್ತು ಒಂದು ಸಾವಿರ ರೂ. ದಂಡ ವಿಧಿಸಿತ್ತು. ಬಳಿಕ 2016ರ ಡಿ. 31ರಂದು ಚಿಕ್ಕಬಳ್ಳಾಪುರ ಸೆಷನ್ಸ್ ನ್ಯಾಯಾಲಯ ಕೂಡ ಆ ಅದೇಶವನ್ನು ಎತ್ತಿಹಿಡಿದಿತ್ತು. ಹಾಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.