ಶಿವಮೊಗ್ಗ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯುವ ಯತ್ನ ಮಾಡಿದ ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸೋಮವಾರ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಎನ್‌ಎಸ್‌ಯುಐ ಘಟಕದ ಕಾಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಮ್ಮ ಸಂವಿಧಾನವನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ವಕೀಲರೊಬ್ಬರು ಸಂವಿಧಾನಕ್ಕೆ ಅಪಚಾರವೆಸಗುವ ಕೃತ್ಯವೆಸಗಿದ್ದು ಖಂಡನೀಯ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ವಕೀಲರನ್ನು ವಕೀಲರ ಪರಿಷತ್ ಅಮಾನತು ಮಾಡಿದೆ. ಆದರೆ ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುವ ಅಪಾಯವಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ವಕೀಲರಾದ ಪ್ರಸನ್ನ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ, ಯುವ ಕಾಂಗ್ರೆಸ್ ಮುಖಂಡ ಸಿ.ಜಿ.ಮಧುಸೂದನ್, ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಬಾಲಾಜಿ, ಚಂದ್ರೋಜಿ ರಾವ್, ಆದಿತ್ಯ, ಸುಬಾನ್, ವರುಣ್ ಪಂಡಿತ್, ಶಬರೀಶ್, ಆಕಾಶ್, ತರುಣ್, ಹಾಲಸ್ವಾಮಿ, ಮನೋಜ್, ಎಲ್‌ಎಲ್‌ಬಿ ಕಾಲೇಜು ಘಟಕದ ಅಧ್ಯಕ್ಷ ಲೋಹಿತ್ ಭಾಗವಹಿಸಿದ್ದರು.