ಕೆ.ಎಂ. ಪಂಕಜ ಬೆಂಗಳೂರು
ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷಿ ‘ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ’ ಯೋಜನೆಯಡಿ 7 ತಿಂಗಳಲ್ಲಿ ಸುವರ್ಣ ಸಮಯದಲ್ಲಿ (ಗೋಲ್ಡನ್ ಅವರ್) 240 ಜೀವಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಯೋಜನೆಯ 2ನೇ ಹಂತಕ್ಕೆ ಚಾಲನೆ ನೀಡಿದ ನಂತರದಲ್ಲಿ (2024ರ ಮಾ. 20) ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೆಸ್ ಇಂಜೆಕ್ಷನ್ ಒದಗಿಸಲಾಗುತ್ತಿದೆ. 25 ಸಾವಿರ ರೂ. ಮೊತ್ತದ ಈ ಚುಚ್ಚುಮದ್ದು ಹೃದಯಾಘಾತಕ್ಕೆ ಒಳಗಾದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ರೋಗಿಯ ಹೃದಯದ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತ ತಿಳಿಗೊಂಡು, ಎದೆನೋವು ಕಡಿಮೆಯಾಗಿ ಪ್ರಾಣಾಪಾಯ ತಪ್ಪಲಿದೆ. ಬಳಿಕ ರೋಗಿಯನ್ನು ಹಬ್ ಕೇಂದ್ರಗಳಿಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಹೃದಯ ಜ್ಯೋತಿ ಯೋಜನೆ?: ಎದೆನೋವು ಕಾಣಿಸಿಕೊಂಡವರು ‘ಸ್ಪೋಕ್’ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ ಎಐ ತಂತ್ರಜ್ಞಾನ ಬಳಸಿ ಕೇವಲ 5 ನಿಮಿಷದೊಳಗೆ ರೋಗಿಯ ಹೃದಯದ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಲಾಗುವುದು. ಅಂದರೆ ರೋಗಿ ಆಸ್ಪತ್ರೆಗೆ ಬಂದ ಕೂಡಲೇ ಇಸಿಜಿ ಪರೀಕ್ಷೆ ನಡೆಸಿ ಅದನ್ನು ಹಬ್ ಕೇಂದ್ರಗಳಿಗೆ ರವಾನಿಸಲಾಗುವುದು. ವರದಿ ಆಧರಿಸಿ ತಜ್ಞರ ಸೂಚನೆ ಮೇರೆಗೆ ರೋಗಿಗೆ ಇಂಜೆಕ್ಷನ್ ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗೆ ಶಿಾರಸು ಮಾಡಲಾಗುವುದು.
ರಾಜ್ಯಾದ್ಯಂತ ವಿಸ್ತರಣೆ: ರಾಜ್ಯ ಸರ್ಕಾರ ಯೋಜನೆಗೆ ಮೊದಲ ಹಂತದಲ್ಲಿ 7 ಕೋಟಿ ರೂ. ಮತ್ತು 2ನೇ ಹಂತದಲ್ಲಿ 25 ಕೋಟಿ ರೂ. ಅನುದಾನ ಒದಗಿಸಿದೆ. ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. ಆರೋಗ್ಯ ಇಲಾಖೆಯು 2025ರ ಡಿಸೆಂಬರ್ ಅಂತ್ಯದೊಳಗೆ ಯೋಜನೆಯನ್ನು ಎಲ್ಲ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಗುರಿ ಹೊಂದಿದೆ ಎಂದು ಇಲಾಖೆಯ ಎನ್‌ಸಿಡಿ ವಿಭಾಗದ ಉಪನಿದೇಶಕ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
86 ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯ: ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, ಮೊದಲ ಹಂತ 2023ರ ಮಾ.20ರಂದು ಹಾಗೂ 2ನೇ ಹಂತ 2024ರ ಮಾ. 20ರಂದು ಆರಂಭಿಸಲಾಗಿದೆ. ಸದ್ಯ ರಾಜ್ಯಾದ್ಯಂತ 16 ಜಿಲ್ಲೆ ಹಾಗೂ 70 ತಾಲೂಕು ಸೇರಿ 86 ಸರ್ಕಾರಿ ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಸೇರಿ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಇಲ್ಲಿ ತೃತೀಯ ಹಂತದ ಚಿಕಿತ್ಸೆ ದೊರೆಯಲಿವೆ ಎಂದು ಹೇಳಿದರು.
3 ಲಕ್ಷಕ್ಕೂ ಅಧಿಕ ರೋಗಿಗಳ ತಪಾಸಣೆ: ಯೋಜನೆಯಡಿ 19 ತಿಂಗಳಲ್ಲಿ (2023ರ ಮಾ. 20ರಿಂದ 2024ರ ಸೆ. 28) 3,07,819 ರೋಗಿಗಳನ್ನು ಪರೀಕ್ಷಿಸಿ 3,20,113 ಇಸಿಜಿ ಮಾಡಲಾಗಿದೆ. ಇವರಲ್ಲಿ 1,64,645 ಮಂದಿಯ ಹೃದಯ ಸ್ಥಿತಿ ಅಸಹಜವಾಗಿರುವುದು ಕಂಡುಬಂದಿದೆ. ಇದಲ್ಲದೆ 17,799 ಮಂದಿಯಲ್ಲಿ ಗಂಭೀರ ಹೃದಯ ಸಮಸ್ಯೆ ಪತ್ತೆಯಾಗಿದೆ. ಉಳಿದಂತೆ 4,921 ಮಂದಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ಇವರಲ್ಲಿ 4,673 ರೋಗಿಗಳಿಗೆ ಯಶಸ್ವಿ ಚಿಕಿತ್ಸೆ (ಥ್ರಂಬೋಲಿಸಿಸ್/ ಆಂಜಿಯೋಪ್ಲ್ಯಾಸ್ಟಿ / ಸ್ಟೆಂಟ್) ಹಾಗೂ 8 ಮಂದಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇವರಲ್ಲಿ 700 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ಸಿಬ್ಬಂದಿಗೆ ತರಬೇತಿ: ಈ ಹೃದಯ ಜ್ಯೋತಿ ಯೋಜನೆಯಡಿ ಹೃದಯ ಚಿಕಿತ್ಸಾ ಘಟಕಗಳಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಆಂಬುಲೆನ್ಸ್ ಚಾಲಕರಿಗೆ ತರಬೇತಿ ನೀಡಲಾಗಿದೆ. ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯಿಂದ ಆನ್‌ಲೈನ್ ಮೂಲಕ ತರಬೇತಿ ನೀಡಲಾಗಿದೆ. ಹೃದಯಾಘಾತಕ್ಕೆ ಒಳಗಾದ ರೋಗಿಗಳನ್ನು ರಕ್ಷಿಸಲು ಇವರೆಲ್ಲರೂ ಸಮರ್ಥರಾಗಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಕೋಟ್:
‘ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ’ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ. ಆರಂಭದಲ್ಲಿ ಟೆನೆಕ್ಟೆಪ್ಲೆಸ್ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಸಿಜಿ ಮಾಡಿ ಹೆಚ್ಚಿನ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿತ್ತು. ಇಂಜೆಕ್ಷನ್ ಬಂದ ಬಳಿಕ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಎಲ್ಲ 86 ಆಸ್ಪತ್ರೆಗಳಲ್ಲೂ ಇಂಜೆಕ್ಷನ್ ಲಭ್ಯವಿದೆ.
-ಡಾ. ಶ್ರೀನಿವಾಸ್, ಎನ್‌ಸಿಡಿ ವಿಭಾಗ, ಆರೋಗ್ಯ ಇಲಾಖೆ ಉಪನಿರ್ದೇಶಕ