ಪುಣೆ: ಹಬ್ಬಗಳು ಬಂತೆಂದರೆ ಸಾಕು ಮನೆ ಶುಚಿಗೊಳಿಸುವ ಕಾರ್ಯಕ್ಕೆ ಮಹಿಳೆಯರು ಮುಂದಾಗುವುದು ಸಾಮಾನ್ಯ. ಆದರೆ, ಶುಚಿ ಕಾರ್ಯದಲ್ಲಿ ಬಿಜಿಯಾಗಿ ಒಮ್ಮೆ ಮೈಮರೆತರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ದೀಪಾವಳಿಯ ಖುಷಿಯಲ್ಲಿರಬೇಕಾದ ಪುಣೆ ಮೂಲದ ಮಹಿಳೆಯೊಬ್ಬಳು ತಾನು ಮಾಡಿದ ಎಡವಟ್ಟಿನಿಂದ ಚಿಂತೆಯಲ್ಲಿ ಮುಳುಗಿ ಸುಖಾಂತ್ಯ ಕಂಡ ಕತೆ ಇದು.
ಪುಣೆಯ ಪಿಂಪಲ್ ಸಾಡಗರ್ ಏರಿಯಾ ನಿವಾಸಿ ರೇಖಾ ಸೆಲುಕರ್, ದೀಪಾವಳಿ ಸಂಭ್ರಮಾಚರಣೆಗೂ ಮುನ್ನ ಮನೆಯ ಶುಚಿ ಕಾರ್ಯದಲ್ಲಿ ಬಿಜಿಯಾಗಿದ್ದರು. ಮನೆಯಲ್ಲಿದ್ದ ಕಸವನೆಲ್ಲಾ ಹೊರಗಾಕುವ ಭರದಲ್ಲಿ ಆಕಸ್ಮಿಕವಾಗಿ ಸಣ್ಣ ಹ್ಯಾಂಡ್ಬ್ಯಾಗ್ ಅನ್ನು ಕಸಕ್ಕೆ ಹಾಕಿದ್ದರು. ಬಳಿಕ ಮನೆಯತ್ರ ಬಂದ ಕಸ ಸಂಗ್ರಹ ವಾಹನ ರೇಖಾರಿಂದ ಕಸ ಸ್ವೀಕರಿಸಿ ಹೋಗಿ ಅದನ್ನು ಡಂಪಿಂಗ್ ಯಾರ್ಡ್ಗೂ ಎಸೆದಿತ್ತು.
ಇತ್ತ ಕಸ ಹೊರಗಾಕಿದ ಎರಡು ಗಂಟೆಗಳ ಬಳಿಕ ಹ್ಯಾಂಡ್ ಬ್ಯಾಗ್ ಒಂದು ಇಲ್ಲದಿರುವುದು ರೇಖಾಗೆ ಮನವರಿಕೆಯಾಗುತ್ತದೆ. ಅದರಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಆಭರಣವೂ ಇರುತ್ತದೆ. ಮಂಗಳಸೂತ್ರ, ಒಂದು ಜತೆ ಆ್ಯಂಕ್ಲೆಟ್ಸ್ ಮತ್ತು ಇನ್ನಿತರ ಆಭರಣ ಬ್ಯಾಗ್ನಲ್ಲಿ ಇರುತ್ತದೆ. ತುಂಬಾ ವರ್ಷಗಳಿಂದ ಉಳಿತಾಯ ಮಾಡಿದ ಹಣದಿಂದ ಕೊಂಡ ಆಭರಣವಾಗಿದ್ದು, ಅದನ್ನು ಕಳೆದುಕೊಂಡ ರೇಖಾ ಕಣ್ಣೀರು ಸುರಿಸುತ್ತಾರೆ. ಕಸದಲ್ಲಿ ಸೇರಿಕೊಂಡಿರಬಹುದು ಎಂದು ಮನವರಿಕೆಯಾದ ಬೆನ್ನಲ್ಲೇ ರೇಖಾ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಕುಟೆ ಅವರಿಗೆ ಫೋನ್ ಮಾಡಿ ಎಲ್ಲವನ್ನು ವಿವರಿಸುತ್ತಾರೆ. ಬಳಿಕ ಸಂಜಯ್ ಪುಣೆ ಕಾರ್ಪೋರೇಷನ್ಗೆ ಮಾಹಿತಿ ನೀಡುತ್ತಾರೆ.
ಕಸ ಸಂಗ್ರಹ ವಾಹನ ಇನ್ನು ಏರಿಯಾದಲ್ಲೇ ಇರಬಹುದು ಎಂದು ಹುಡುಕಾಡುತ್ತಾರೆ. ಆದರೆ, ಅದಾಗಲೇ ಕಸವನ್ನು ವಾಹನ ಬೀಸಾಡಿ ಬಂದಿರುತ್ತದೆ. ಬಳಿಕ ಅಧಿಕಾರಿಯೊಬ್ಬರು ಘಟನೆ ಬಗ್ಗೆ ವಿವರಿಸಿ ಬ್ಯಾಗ್ ಹುಡುಕೊಂಡು ಬರಲು ಸಿಬ್ಬಂದಿ ಹೇಳುತ್ತಾರೆ. ಬಳಿಕ ಸ್ಥಳಕ್ಕೆ ತೆರಳುವ ಸಿಬ್ಬಂದಿ ಸುಮಾರು 40 ನಿಮಿಷಗಳ ಶೋಧ ಕಾರ್ಯಾಚರಣೆ ಬಳಿಕ ಬ್ಯಾಗ್ ಪತ್ತೆ ಮಾಡುತ್ತಾರೆ. ಬಳಿಕ ಅದನ್ನು ಮರಳಿ ರೇಖಾ ತಲುಪಿಸುತ್ತಾರೆ. ಬ್ಯಾಗ್ ತೆರೆದು ನೋಡಿದ ರೇಖಾ, ಎಲ್ಲ ಆಭರಣಗಳು ಸುರಕ್ಷಿತವಾಗಿದ್ದುದ್ದನ್ನು ನೋಡಿ ನಿಟ್ಟುಸಿರು ಬಿಡುತ್ತಾರೆ. (ಏಜೆನ್ಸೀಸ್)