ಮಹಾರಾಷ್ಟ್ರ: ತನ್ನ ಮನೆ ಬಾಗಿಲಿಗೆ ತಡವಾಗಿ ಪಿಜ್ಜಾ ಬಂದಿದ್ದಕ್ಕಾಗಿ ಡೆಲಿವರಿ ಬಾಯ್‌ನ ಮೇಲೆ ಹಲ್ಲೆ ನಡೆಸಿ, ನಂತರ ಗಾಳಿಯಲ್ಲಿ ಗುಂಡು ಹಾರಿಸಿದ 27 ವರ್ಷದ ಯುವಕನನ್ನು ಮಹಾರಾಷ್ಟ್ರದ ಪುಣೆ ನಗರದಲ್ಲಿ ಬಂಧಿಸಲಾಗಿದೆ. ಅಧಿಕಾರಿಯೊಬ್ಬರು ಬುಧವಾರ ಈ ಮಾಹಿತಿ ನೀಡಿದ್ದಾರೆ.
ಆರೋಪಿ ಚೇತನ್ ಪಡ್ವಾಲ್ ಸೋಮವಾರ ರಾತ್ರಿ ನಗರದ ವಾಘೋಲಿ ಪ್ರದೇಶದ ಜನಪ್ರಿಯ ಪಿಜ್ಜಾ ಔಟ್‌ಲೆಟ್‌ನಲ್ಲಿ ಆರ್ಡರ್ ಮಾಡಿದ್ದಾನೆ.
ಲೋನಿಕಂಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ, ಡೆಲಿವರಿ ಮ್ಯಾನ್ ಋಷಿಕೇಶ್ ಅನ್ನಪುರ್ವೆ, ಚೇತನ್ ಪಡ್ವಾಲ್ ಅವರ ಮನೆಗೆ ಆರ್ಡರ್ ತಡವಾಗಿ ತಲುಪಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅನ್ನಪುರ್ವೆ ಅವರ ಇಬ್ಬರು ಸಹೋದ್ಯೋಗಿಗಳು ತನ್ನ ಸಿಬ್ಬಂದಿಯ ಮೇಲೆ ಏಕೆ ಹಲ್ಲೆ ನಡೆಸಿದ್ದಾರೆ ಎಂದು ವಿವರಣೆ ನೀಡುವಂತೆ ಒತ್ತಾಯಿಸಲು ಸ್ಥಳಕ್ಕೆ ಬಂದಾಗ, ಪಡ್ವಾಲ್ ಅವರಲ್ಲಿ ಒಬ್ಬನ ಕೊರಳಪಟ್ಟಿ ಹಿಡಿದು ಅವರ ಮೇಲೂ ಹಲ್ಲೆ ನಡೆಸಿದ್ದಾನೆ.
ಕೋಪಗೊಂಡ ಪಡ್ವಾಲ್, ತನ್ನ ರೋಹೌಸ್ ಬಳಿ ನಿಲ್ಲಿಸಿದ್ದ ತನ್ನ ಎಸ್‌ಯುವಿ ಕಡೆಗೆ ಓಡಿ, ಪಿಸ್ತೂಲ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಜ್ಜಾ ಮಾರಾಟಗಾರರ ಉದ್ಯೋಗಿಗಳ ದೂರಿನ ಮೇರೆಗೆ ಪೊಲೀಸರು ಪಡ್ವಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308, 323, 504 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ದೂರಿನ ಪ್ರಕಾರ, ಪಡ್ವಾಲ್ ವಾಸಿಸುವ ಹೌಸಿಂಗ್ ಸೊಸೈಟಿಯ ಮೇಲಿನ ಮಹಡಿಯಲ್ಲಿ ಯಾರಿಗಾದರೂ ಗುಂಡು ತಗುಲಿರಬಹುದು. ಆದರೆ ಪಡ್ವಾಲ್ಗೆ ಪಿಸ್ತೂಲ್ ಪರವಾನಗಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.