ಶಿವಮೊಗ್ಗ: ವಿದ್ಯಾರ್ಥಿಗಳು ಗುರಿ ಸಾಧಿಸಲು ಏಕಾಗ್ರತೆ ಹಾಗೂ ನಿರಂತರ ಪ್ರಯತ್ನ ಅಗತ್ಯ. ಸಾಧಕರಿಂದ ಪ್ರೇರಣೆ ಪಡೆದು ಕಠಿಣ ಪರಿಶ್ರಮ ವಹಿಸಿದರೆ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಪಿಇಎಸ್ ಮುಖ್ಯ ಸಮನ್ವಯಾಧಿಕಾರಿ ಡಾ. ಆರ್.ನಾಗರಾಜ ಹೇಳಿದರು.
ಪಿಇಎಸ್ ಪಿಯು ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯಪಾಲನೆ ಹಾಗೂ ಶಿಸ್ತು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸಿನತ್ತ ಸಾಗಬಹುದು ಎಂದರು. ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ. ಎ.ನಾಗರಾಜ ಬಾಬು, ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಯೋಗೇಶ್, ಗಣಕಯಂತ್ರ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಗಣೇಶ್ ನಾಗ್ ಉಪಸ್ಥಿತರಿದ್ದರು.
ನೀಟ್‌ನಲ್ಲಿ 720ಕ್ಕೆ 636 ಅಂಕ ಪಡೆದು ಗದಗ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸರ್ಕಾರಿ ಸೀಟು ಪಡೆದ ಕಾಲೇಜಿನ ಹಳೆಯ ವಿದ್ಯಾರ್ಥಿ ಲತೀಫ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.