ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಡಿಎಚ್‌ಒ ಡಾ. ನಟರಾಜ್, ಡಾ. ಕೆ.ಪರಪ್ಪ, ಚಂದ್ರಶೇಖರ ನಾಯ್ಕ ಇದ್ದರು.  
ನ್ಯೂಸ್

ಸರ್ಕಾರಿ ಆಸ್ಪತ್ರೆಯಲ್ಲಿ ಸಮಯ ಪಾಲಿಸಿ

ಸಾಗರ: ಸರ್ಕಾರಿ ಆಸ್ಪತ್ರೆ ಛತ್ರವಲ್ಲ. ಇಲ್ಲಿ ಸಮಯಪಾಲನೆಯೊಂದಿಗೆ ಕಾರ್ಯನಿರ್ವಹಿಸಿ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಉತ್ತಮ ಹೆಸರು ಇದೆ. ಅದನ್ನು ಹಾಳು ಮಾಡಬೇಡಿ ಎಂದು ವೈದ್ಯರು, ಸಿಬ್ಬಂದಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ಕಾಗಿ ಸೂಚಿಸಿದರು.

ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಂಗಳವಾರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕೆಲವು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ನಿಮಗೆ ಕರ್ತವ್ಯ ಮಾಡಲು ಇಷ್ಟ ಇರದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದರು.

ಎಲ್ಲ ವೈದ್ಯ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಾರೋ ಮಾಡುವ ತಪ್ಪಿನಿಂದ ಇಡೀ ವ್ಯವಸ್ಥೆ ಮೇಲೆ ಕೆಟ್ಟಹೆಸರು ಬರುವಂತೆ ಮಾಡಬೇಡಿ. ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಆದರೆ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.

ಆಸ್ಪತ್ರೆಯ ಮೂವರು ನರ್ಸ್ ಮತ್ತು ಮೂರ‌್ನಾಲ್ಕು ಗ್ರೂಪ್ ಡಿ ನೌಕರರ ಬಗ್ಗೆ ದೂರುಗಳಿವೆ. ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ ಜರುಗಿಸುತ್ತೇನೆ. ಆಸ್ಪತ್ರೆಯಲ್ಲಿ ನೇತ್ರ ವೈದ್ಯರು, ಫಿಜಿಶಿಯನ್ ಕೊರತೆ ಇದ್ದು, ತಕ್ಷಣ ಭರ್ತಿ ಮಾಡುವುದು, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಮಂಜುಳಾ ಭಜಂತ್ರಿ, ನಗರಸಭೆ ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.