ರಾಣೆಬೆನ್ನೂರ: ರಾಣೆಬೆನ್ನೂರ ಸೇರಿ ಜಿಲ್ಲೆಯ ತುಂಗಭದ್ರಾ, ವರದಾ ನದಿಪಾತ್ರ ಹಾಗೂ ಇತರೆಡೆ ತಾಮ್ರಕ್ಕಾಗಿ ರೈತರ ಪಂಪಸೆಟ್ ಕಳ್ಳತನ ಮತ್ತು ಕೇಬಲ್ಗಳನ್ನು ದೋಚುತ್ತಿರುವ ಗ್ಯಾಂಗ್ ಪತ್ತೆಗಾಗಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.
ಈ ಕುರಿತು "ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, ರೈತರಿಗೆ ಪಂಪಸೆಟ್ ಅಮೂಲ್ಯವಾದ ವಸ್ತುವಾಗಿದೆ. ಅದನ್ನು ಕಳ್ಳತನ ಮಾಡುವುದರಿಂದ ರೈತರು ಬೆಳೆಗಳಿಗೆ ನೀರು ಹಾಯಿಸಲು ಆಗದೆ ಕಷ್ಟ ಎದುರಿಸುವ ಪರಿಸ್ಥಿತಿ ಬರಲಿದೆ. ಆದ್ದರಿಂದ ಈಗಾಗಲೇ ತಾಮ್ರಕ್ಕಾಗಿ ಪಂಪಸೆಟ್ಗಳ ಕಳ್ಳತನ ಆಗಿರುವ ಪ್ರಕರಣದ ಕುರಿತು ಮಾಹಿತಿ ಪಡೆಯಲಾಗಿದೆ.
ಕೂಡಲೇ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಶೇಷ ತಂಡ ರಚನೆ ಮಾಡಲಾಗುವುದು. ಆ ಮೂಲಕ ಕಾರ್ಯಾಚರಣೆ ಕೈಗೊಂಡು ಆದಷ್ಟು ಬೇಗ ಪಂಪಸೆಟ್ ಕಳ್ಳರ ಗ್ಯಾಂಗ್ ಪತ್ತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ತುಂಗಭದ್ರಾ ನದಿಪಾತ್ರ ಹಾಗೂ ಇತರ ಕಡೆ ಪಂಪಸೆಟ್ ಕಳ್ಳತನ ಆಗುತ್ತಿರುವ ಕುರಿತು ವಿಜಯವಾಣಿ ಪತ್ರಿಕೆ "ತಾಮ್ರಕ್ಕಾಗಿ ಪಂಪಸೆಟ್ ದೋಚುವ ಗ್ಯಾಂಗ್' ಶಿರ್ಷೀಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿದೆ.