ನ್ಯೂಸ್

ಪುಲ್ವಾಮಾ ಪಾತಕಿ ಕೃತ್ಯ, ಕಳಚಿತು ಪಾಕ್​ ಮುಖವಾಡ...

ದಶಕಗಳಿಂದ ಉಗ್ರರನ್ನು ಪೋಷಿಸುತ್ತಿದ್ದರೂ ಹೊರಲೋಕದೆದುರಿಗೆ ಅದನ್ನು ಅಲ್ಲಗಳೆಯುವ ಕಪಟತನ, ಯುದ್ಧಕ್ಕೆ ಸಿದ್ಧ ಎಂದು ಹೇಳುತ್ತಲೇ ವಾಸ್ತವದಲ್ಲಿ ಹೆದರುವ ಪಾಕಿಸ್ತಾನದ ಮನಸ್ಥಿತಿ ಮತ್ತೆ ಬಯಲಾಗಿದೆ. ಭಾರತದ ಪುಲ್ವಾಮಾದಲ್ಲಿ ನಡೆಸಿದ ದಾಳಿ ಇಮ್ರಾನ್ ಖಾನ್ ಸರ್ಕಾರದ ಸಾಧನೆ ಎಂದು ಅವರ ಸಂಪುಟದ ಸದಸ್ಯರು ಸಂಸತ್​ನಲ್ಲೇ ಬೆನ್ತಟ್ಟಿಕೊಂಡರೆ, ಭಾರತ ಯುದ್ಧ ಸಾರುವ ಭೀತಿಯಿಂದಲೇ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಯಿತೆಂಬ ಗುಟ್ಟನ್ನು ವಿಪಕ್ಷ ನಾಯಕರೊಬ್ಬರು ರಟ್ಟುಮಾಡಿದ್ದಾರೆ.

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆ.14ರಂದು ಕಾರ್ ಬಾಂಬ್ ಸ್ಪೋಟಿಸಿ 40 ಭಾರತೀಯ ಯೋಧರನ್ನು ಹತ್ಯೆಗೈದಿದ್ದ ದುಷ್ಕೃತ್ಯದ ಹೊಣೆಯನ್ನು ಕೊನೆಗೂ ಪಾಕಿಸ್ತಾನ ಹೊತ್ತುಕೊಂಡಿದೆ. ಆ ಮೂಲಕ, ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕು ನೀಡುತ್ತಿದೆ ಎಂಬ ಭಾರತದ ಆಪಾದನೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆಪುಷ್ಟಿ ಸಿಕ್ಕಂತಾಗಿದೆ. ಗುರುವಾರ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ನಡೆದ ಜಿದ್ದಾಜಿದ್ದಿನ ಚರ್ಚೆ ವೇಳೆ ಬಣ್ಣ ಬಯಲು ಮಾಡಿಕೊಂಡರು. ಒಂದು ಹಂತದಲ್ಲಿ ವಿಪಕ್ಷಗಳ ಟೀಕೆಗಳಿಂದ ಕೆರಳಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಅಹ್ಮದ್ ಚೌಧರಿ ‘ಪುಲ್ವಾಮಾ ದಾಳಿ ನಮ್ಮ ಸರ್ಕಾರದ ಸಾಧನೆ’ ಎಂದು ಕೊಚ್ಚಿಕೊಂಡರು.

ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ‘ನಾನು ಹೇಳಿದ್ದು ಪುಲ್ವಾಮಾದ ಉಗ್ರರ ದಾಳಿ ಬಗ್ಗೆಯಲ್ಲ. ಆ ದಾಳಿಯ ನಂತರ ನಮ್ಮ ಸೇನೆ ನಡೆಸಿದ ವೈಮಾನಿಕ ಕಾರ್ಯಾಚರಣೆ ಬಗ್ಗೆ. ನಾವು ಜನರನ್ನು ಕೊಲ್ಲುವ ಮೂಲಕ ಶೌರ್ಯ ತೋರಿಲ್ಲ. ಉಗ್ರವಾದವನ್ನು ನಾವೂ ಖಂಡಿಸುತ್ತೇವೆ’ ಎಂದು ತಿಪ್ಪೆ ಸಾರಿಸುವ ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ ಲಾಭವೇನು?

  • ಪಾಕಿಸ್ತಾನ ಉಗ್ರ ನಂಟಿಗೆ ಬಲವಾದ ಸಾಕ್ಷ್ಯ ಸಿಕ್ಕಿದ್ದು
  • ಜಾಗತಿಕ ವೇದಿಕೆಯಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಬಹುದು
  • ಆರ್ಥಿಕ ಸಹಕಾರಕ್ಕೆ ತಡೆಯೊಡ್ಡಲು ಆಗ್ರಹ ಮಾಡಬಹುದು
  • ಪಾಕ್​ನಲ್ಲಿರುವ ಉಗ್ರರನ್ನು ಒಪ್ಪಿಸಲು ಕೇಳಬಹುದು

ಪಾಕ್​ಗೇನು ಆತಂಕ?

  • ಜಾಗತಿಕ ಮಟ್ಟದಲ್ಲಿ ಆಪ್ತರಾಷ್ಟ್ರಗಳ ಸ್ನೇಹ ಹಳಸಬಹುದು
  • ಎಲ್ಲ ರೀತಿಯ ಆರ್ಥಿಕ ನೆರವು ಸ್ಥಗಿತಗೊಳ್ಳಬಹುದು
  • ಭಾರತಕ್ಕೆ ವಿಶ್ವ ಬೆಂಬಲ ಸಿಕ್ಕರೆ ತಾನು ಏಕಾಂಗಿಯಾಗಬೇಕಾಗಬಹುದು

ಜಗತ್ತಿಗೇ ಗೊತ್ತು

ಉಗ್ರವಾದಕ್ಕೆ ಪಾಕ್ ಸರ್ಕಾರದ ಬೆಂಬಲ ಇರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಉಗ್ರರ ಮೂಲಕ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮರೆ ಮಾಚಲು ಎಷ್ಟೇ ಪ್ರಯತ್ನಪಟ್ಟರೂ ಸತ್ಯವನ್ನು ಅಡಗಿಸಲಾಗದು ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆ ಗುರುತಿಸಿರುವ ಉಗ್ರರಲ್ಲಿ ಅನೇಕರಿಗೆ ಪಾಕ್ ಆಶ್ರಯ ನೀಡಿದೆ. ಈಗ ಪಾಕ್ ಸಚಿವರ ಬಾಯಿಂದಲೇ ಭಯೋತ್ಪಾದನೆಯಲ್ಲಿ ಸರ್ಕಾರದ ಪಾತ್ರ ಇದೆ ಎಂಬ ನಿಜ ಹೊರಬಿದ್ದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಮಂಗಳವಾರ ನಡೆದ ಭಾರತ ಮತ್ತು ಅಮೆರಿಕದ 2+2 (ವಿದೇಶಾಂಗ ಮತ್ತು ರಕ್ಷಣಾ) ಸಚಿವರ ಸಭೆಯಲ್ಲೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಲಾಯಿತು. ವಿಧ್ವಂಸಕ ಕೃತ್ಯವನ್ನು ತಡೆಯಲು ಪಾಕ್ ದೃಢ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಇದನ್ನು ಟೀಕಿಸಿದ್ದ ಪಾಕ್, ಉಭಯ ದೇಶಗಳ ಈ ಅನಪೇಕ್ಷಿತ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಬುಧವಾರ ಹೇಳಿತ್ತು.

ನಡುಗಿದ್ದ ಪಾಕ್ ಜನರಲ್!

ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಬಳಿಕ ಭಾರತದ ವಾಯು ಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ರನ್ನು ಪಾಕ್ ಬಂಧಿಸಿತ್ತು. ಅಭಿನಂದನ್​ರನ್ನು ಶೀಘ್ರ ಬಿಡುಗಡೆ ಮಾಡದಿದ್ದಲ್ಲಿ ಭಾರತ ದಾಳಿ ನಡೆಸಬಹುದೆಂಬ ಆತಂಕದಲ್ಲಿ, ರಕ್ಷಣಾ ಸಚಿವರ ಜತೆಗಿನ ಸಭೆ ವೇಳೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಕಾಲು ನಡುಗುತ್ತಿತ್ತು ಎಂದು ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಇದರೊಂದಿಗೆ ಔದಾರ್ಯದಿಂದ ಅಭಿನಂದನ್​ರನ್ನು ಬಿಡುಗಡೆ ಮಾಡಿದ್ದಾಗಿ ಕೊಚ್ಚಿಕೊಂಡಿದ್ದ ಪಾಕ್​ಗೆ ತೀವ್ರ ಮುಖಭಂಗವಾಗಿದೆ.