ನ್ಯೂಸ್

ದುಲೀಪ್ ಟ್ರೋಫಿ ಆಡಲಿದ್ದಾರೆ ಪೂಜಾರ, ಸೂರ್ಯಕುಮಾರ್: ಟೂರ್ನಿಗೆ ಬೆಂಗಳೂರು ಆತಿಥ್ಯ

ಗುರುರಾಜ್ ಬಿ.ಎಸ್

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ನೀರಸ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಟೆಸ್ಟ್ ತಜ್ಞ ಬ್ಯಾಟರ್ ಚೇತೇಶ್ವರ ಪೂಜಾರ ದೇಶೀಯ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾದ ಬಳಿಕ ಹತಾಶೆ ವ್ಯಕ್ತಪಡಿಸದ ಪೂಜಾರ, ಮರುದಿನವೇ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಮರಳಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಪಿಪ್ ಫೈನಲ್ ಆಡಿದ ಪೂಜಾರ ವಿಶ್ರಾಂತಿ ಬಯಸದೆ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಯಲು ನಿರ್ಧರಿಸಿದ್ದಾರೆ. ಜೂನ್ 28 ರಿಂದ ಬೆಂಗಳೂರಿನಲ್ಲಿ ಪ್ರತಿಷ್ಠಿತ ಟೂರ್ನಿ ಆರಂಭವಾಗಲಿದ್ದು, ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಬೆಂಗಳೂರು ಹೊರವಲಯದ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ.

ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಎನಿಸಿರುವ ಪಶ್ಚಿಮ ವಲಯ ತಂಡದ ಪರ ಚೇತೇಶ್ವರ ಪೂಜಾರ ಆಡಲಿದ್ದಾರೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್ ಸಹ ಕಣಕ್ಕಿಳಿಲ್ಲಿದ್ದಾರೆ. ಕೇಂದ್ರ ವಲಯ-ಪೂರ್ವ ವಲಯ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯದ ವಿಜೇತ ತಂಡ ಜುಲೈ 5 ರಂದು ಪಶ್ವಿಮ ವಲಯ ತಂಡದ ವಿರುದ್ಧ ಸೆಮೀಸ್‌ನಲ್ಲಿ ಸೆಣಸಾಟ ನಡೆಸಲಿದೆ.