ನ್ಯೂಸ್

ಸಂಕಷ್ಟದಲ್ಲಿ ಟ್ರೈನಿ ಐಎಎಸ್ ಅಧಿಕಾರಿ..ನಕಲಿ ವಿಳಾಸ ಸಲ್ಲಿಸಿ ಅಂಗವಿಕಲ ಪ್ರಮಾಣಪತ್ರ!

Webdesk - Narayanaswamy

ನವದೆಹಲಿ: ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿಷಯದಲ್ಲಿ ಒಂದಾದ ಮೇಲೆ ಒಂದರಂತೆ ಪ್ರಮುಖ ವಿಷಯಗಳು ಬೆಳಕಿಗೆ ಬರುತ್ತಿವೆ. ಪೂಜಾ ಅಂಗವಿಕಲರ ಪ್ರಮಾಣ ಪತ್ರಕ್ಕೆ ಸುಳ್ಳು ವಿಳಾಸ ಹಾಗೂ ನಕಲಿ ಪಡಿತರ ಚೀಟಿ ಬಳಸಿರುವುದು ಪತ್ತೆಯಾಗಿದೆ.

ಪ್ರಮಾಣ ಪತ್ರ ಪಡೆಯುವಾಗ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ ಖೇಡ್ಕರ್, ಥರ್ಮೋವೆರಿಟಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ನಿಷ್ಕ್ರಿಯ ಕಂಪನಿ ವಿಳಾಸ ಸಲ್ಲಿಸಲಾಗಿದೆ. ಆದರೆ ಇದು ನಿಜವಾದ ವಸತಿ ಅಲ್ಲ. ಬದಲಾಗಿ ಪ್ಲಾಟ್ ನಂ. 53, ದೇಹು-ಅಲಂದಿ, ತಲವಾಡೆ, ಚಿಂಚ್‌ವಾಡ್‌, ಮಹಾರಾಷ್ಟ್ರ ಅವರ ವಿಳಾಸ ವಾಗಿದೆ.

2022ರ ಆಗಸ್ಟ್ 24 ರಂದು ನೀಡಲಾದ ಪ್ರಮಾಣಪತ್ರವು ಮೊಣಕಾಲು ಏಳು ಪ್ರತಿಶತ ಅಂಗವೈಕಲ್ಯವನ್ನು ಹೊಂದಿದೆ ಎಂದು ಹೇಳಿದೆ. ಇದಲ್ಲದೇ ಇದೇ ಥರ್ಮೋವೆರಿಟಾ ಕಂಪನಿಯ ಹೆಸರಿನಲ್ಲಿ ಆಡಿ ಕಾರು ಕೂಡ ನೋಂದಣಿಯಾಗಿದೆ. ಪಿಂಪ್ರಿ ಚಿಂಚ್‌ವಾಡ್ ಪುರಸಭೆಯ ತೆರಿಗೆ ಸಂಗ್ರಹ ವಿಭಾಗದ ಪ್ರಕಾರ, ಈ ಕಂಪನಿಯು 2.7 ಲಕ್ಷ ರೂ. ಬಾಕಿಯಿದೆ.

2023 ರ ಬ್ಯಾಚ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಯುಪಿಎಸ್‌ಸಿ ನೇಮಕಾತಿಗಾಗಿ ನಕಲಿ ಅಂಗವೈಕಲ್ಯ ಪ್ರಮಾಣಪತ್ರವನ್ನು ತಯಾರಿಸಿದ ಆರೋಪದ ಮೇಲೆ ತನಿಖೆಯಲ್ಲಿದ್ದಾರೆ. ಪುಣೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಸಂಜೆ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರ ಆಸ್ತಿ ಕುರಿತು ಸಮಗ್ರ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಕಚೇರಿಗೆ ಸಲ್ಲಿಸಿದೆ.

2020 ರಲ್ಲಿ ನಿವೃತ್ತಿಯಾಗುವವರೆಗೂ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ನಿರ್ದೇಶಕರಾಗಿ ಸೇವೆ ಸಲ್ಲಿಸಿದ ದಿಲೀಪ್ ಖೇಡ್ಕರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೇಲಧಿಕಾರಿಗಳ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೂಜಾ ಅವರ ಕಾರ್ಯವೈಖರಿ ಬಗ್ಗೆ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ನಂತರ ಆಕೆಯನ್ನು ಪುಣೆಯಿಂದ ವಾಶಿಮ್‌ಗೆ ಹೆಚ್ಚುವರಿ ಸಹಾಯಕ ಕಲೆಕ್ಟರ್ ಆಗಿ ವರ್ಗಾಯಿಸಲಾಗಿದೆ. ಆಕೆ ಪ್ರತ್ಯೇಕ ಕಚೇರಿ, ಅಧಿಕೃತ ನಿವಾಸ, ಕಾರು ಹಾಗೂ ಸಹಾಯಕ ಸಿಬ್ಬಂದಿಗೆ ಬೇಡಿಕೆ ಇಟ್ಟಿದ್ದರು. ಆದರೆ ತರಬೇತಿ ಅಧಿಕಾರಿಗಳು ಈ ಭತ್ಯೆಗಳಿಗೆ ಅರ್ಹರಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಇನ್ನು ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಖೇಡ್ಕರ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ. ಆರೋಪಗಳನ್ನು ಖೇಡ್ಕರ್ ನಿರಾಕರಿಸಿದ್ದಾರೆ.