ನವದೆಹಲಿ: ಮಹಾರಾಷ್ಟ್ರ ಕೇಡರ್‌ನಿಂದ ವಜಾಗೊಂಡಿರುವ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಕೇಂದ್ರ ಲೋಕಾಸೇವಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬುಧವಾರ(ಆಗಸ್ಟ್ 7) ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನು ಓದಿ: ಅಬಕಾರಿ ನೀತಿ ಪ್ರಕರಣ; ಬಂಧನ ಪ್ರಶ್ನಿಸಿ ಸಿಎಂ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್
ಕೇಂದ್ರ ಲೋಕಸೇವಾ ಆಯೋಗವು(ಕೆಪಿಎಸ್ಸಿ) ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಪೂಜಾ ಖೇಡ್ಕರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿದ ಯುಪಿಎಸ್ಸಿ ಆದೇಶವನ್ನು ತಾವು ಇನ್ನೂ ಸ್ವೀಕರಿಸಿಲ್ಲ. ಹಾಗೂ ಈ ಬೆಳವಣಿಗೆಯನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿರುವುದಾಗಿ ಪೂಜಾ ಖೇಡ್ಕರ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ವಂಚನೆ ಮತ್ತು ಫೋರ್ಜರಿ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಲು ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಯುಪಿಎಸ್ಸಿ ಜುಲೈ 31ರಂದು ತಿಳಿಸಿತ್ತು. ಅಲ್ಲದೆ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರೆಂದು ತಿಳಿದ ಬಳಿಕ ಯುಪಿಎಸ್ಸಿ ಪೂಜಾ ಖೇಡ್ಕರ್ ಮುಂದಿನ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿಷೇಧ ಹೇರಿದೆ.
ಈ ಪ್ರಕರಣದ ವಿಚಿತ್ರವೆಂದರೆ ಉಮೇದುವಾರಿಕೆಯನ್ನು ರದ್ದುಗೊಳಿಸುವ ಆದೇಶವನ್ನು ಇಲ್ಲಿಯವರೆಗೆ ಹಸ್ತಾಂತರಿಸಲಾಗಿಲ್ಲ. ನನ್ನ ಬಳಿ ಇರುವುದು ಪತ್ರಿಕಾ ಪ್ರಕಟಣೆ ಮಾತ್ರ. ಪತ್ರಿಕಾ ಪ್ರಕಟಣೆಯನ್ನು ರದ್ದುಗೊಳಿಸಬೇಕು. ಅವರು ನನಗೆ ಆದೇಶವನ್ನು ಪೂರೈಸಬೇಕು ಇದರಿಂದ ಸೂಕ್ತ ನ್ಯಾಯಮಂಡಳಿಯನ್ನು ಸಂಪರ್ಕಿಸಬಹುದು ಎಂದು ಪೂಜಾ ಖೇಡ್ಕರ್ ಪರ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಪೂಜಾ ಖೇಡ್ಕರ್ ಅವರು ಎಲ್ಲಿದ್ದಾರೆ ಎಂಬುದು ತಿಳಿಯದ ಕಾರಣ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಎರಡು ದಿನಗಳಲ್ಲಿ ಪೂಜಾ ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸುವ ಆದೇಶವನ್ನು ನೀಡುವುದಾಗಿ ದೆಹಲಿ ಹೈಕೋರ್ಟ್‌ಗೆ ಯುಪಿಎಸ್ಸಿ ಪರ ವಕಿಲ ತಿಳಿಸಿದ್ದಾರೆ.
ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಲು ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಪೂಜಾ ಖೇಡ್ಕರ್ ಅವರಿಗೆ ಹೈಕೋರ್ಟ್ ಸ್ವಾತಂತ್ರ್ಯವನ್ನು ನೀಡಿದೆ. ಪೂಜಾ ಖೇಡ್ಕರ್ ವಿರುದ್ಧ, ತರಬೇತಿ ನಿರತ ಐಎಎಸ್ ಅಧಿಕಾರಿಯಾಗಿ ತನಗೆ ಅರ್ಹವಲ್ಲದ ಸೌಲಭ್ಯಗಳನ್ನು ಕೇಳಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ಚೇಂಬರ್ ಅನ್ನು ಒತ್ತುವರಿ ಮಾಡಿರುವ ಆರೋಪ, ಖೇಡ್ಕರ್ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ, ಪೂಜಾ ಖೇಡ್ಕರ್ ತಮ್ಮ ವೈಯಕ್ತಿಕ ಆಡಿ ಕಾರಿನಲ್ಲಿ ಕೆಂಪು ಬೀಕನ್ ಮತ್ತು ಮಹಾರಾಷ್ಟ್ರ ಸರ್ಕಾರದ ಫಲಕವನ್ನು ಅಳವಡಿಸಿದ್ದಾರೆ ಎಂಬ ಆರೋಪಗಳಿವೆ.(ಏಜೆನ್ಸೀಸ್)