ಇಂದು ವಿಶ್ವ ಪುಸ್ತಕ ದಿನ. ಕೃತಿಸ್ವಾಮ್ಯದ ಅರಿವು ಮೂಡಿಸುವ ದಿನವೂ ಹೌದು. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು, ಕೋವಿಡ್ ಲಾಕ್ಡೌನ್ನಿಂದಾದ ಲಾಭ, ಇ-ಬುಕ್, ಆಡಿಯೋ ಬುಕ್ಗಳ ಪ್ರವರ್ಧಮಾನ ಹಾಗೂ ಸೆಲ್ಪ್ ಪಬ್ಲಿಷಿಂಗ್ ಟ್ರೆಂಡ್ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ಆಪ್ತೇಷ್ಟರ ಬಳಗಕ್ಕಷ್ಟೇ ಆನ್ಲೈನ್ ಸೀಮಿತ
| ಪ್ರಕಾಶ ಕಂಬತ್ತಳ್ಳಿ ಅಂಕಿತ ಪುಸ್ತಕ, ಬೆಂಗಳೂರು
- ಆನ್ಲೈನ್ನಲ್ಲಿ ನಮ್ಮ ಸ್ನೇಹಿತರು, ಆಪ್ತೇಷ್ಟರ ಬಳಗ ಮಾತ್ರ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಪುಸ್ತಕೋದ್ಯಮ ಇದರಿಂದ ಬೆಳೆಯುತ್ತೆ ಎನ್ನಲಿಕ್ಕಾಗುವುದಿಲ್ಲ. ಯಾವುದೇ ಕೃತಿಯಾದರೂ ಸಾರ್ವತ್ರಿಕ ಮನ್ನಣೆಗೆ ಪಾತ್ರವಾಗಬೇಕು. ಹಾಗಾದಾಗ ಮಾತ್ರ ಪುಸ್ತಕ ಸಂಸ್ಕೃತಿ ಬೆಳೆಯಬಲ್ಲದು. ಆನ್ಲೈನ್ದಿಂದಾದ ಒಂದು ಅನುಕೂಲವೆಂದರೆ ದೂರದ ಊರಿನಲ್ಲಿ ಇರುವವರಿಗೆ ಖರೀದಿಸಲು ಸಾಧ್ಯವಾಗಿದ್ದು. ಏಕೆಂದರೆ ಪುಸ್ತಕದಂಗಡಿಗಳೇ ಇರದ ಜಿಲ್ಲಾಕೇಂದ್ರಗಳು, ನಗರ ಹಾಗೂ ಪಟ್ಟಣ ಪ್ರದೇಶಗಳು ಇನ್ನೂ ನಮ್ಮಲ್ಲಿವೆ.
- ಪುಸ್ತಕಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಇದಕ್ಕೆ ಇ-ಬುಕ್, ಆಡಿಯೋ ಬುಕ್ಗಳು ಕಾರಣಗಳಲ್ಲ. ಖ್ಯಾತನಾಮರ ಕೃತಿಗಳನ್ನು ಇದಕ್ಕೆ ರೂಪಾಂತರಿಸಿದರೂ ಬೇಡಿಕೆ ಕಂಡುಬರಲಿಲ್ಲ. ಈಗಲೂ ಜನರು ಪುಸ್ತಕಗಳನ್ನೇ ಬಯಸುತ್ತಾರೆ. ಜತೆಗೆ, ಶಿಕ್ಷಣ ಹಂತದಲ್ಲಿ ಕನ್ನಡವೇ ಕಡ್ಡಾಯವಾಗದಿರುವಾಗ ಕನ್ನಡ ಪುಸ್ತಕಗಳ ಓದು ವಿಸ್ತರಿಸುವುದಾದರೂ ಹೇಗೆ? ನಮ್ಮಲ್ಲಷ್ಟೇ ಅಲ್ಲ, ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಈ ಸಮಸ್ಯೆಯಿದೆ.
- ಸೆಲ್ಫ್ ಪಬ್ಲಿಷಿಂಗ್ (ಸ್ವಯಂ ಪ್ರಕಾಶನ) ಟ್ರೆಂಡ್ ಹೆಚ್ಚಾಗುತ್ತಿದೆ. ಹೊಸ ಹೊಸ ಓದುಗರು, ಲೇಖಕರು ಹೆಚ್ಚಾಗುತ್ತಿದ್ದಾರೆ. ಆದರೆ, ಇದರಿಂದ ಉದ್ಯಮ ಬೆಳೆಯುತ್ತದೆ ಎಂದು ಹೇಳಲಾಗದು. ಏಕೆಂದರೆ, ಉದ್ಯಮದ ಎಲ್ಲರನ್ನೂ ಈ ಪ್ರಕ್ರಿಯೆಗಳು ಒಳಗೊಳ್ಳುವುದಿಲ್ಲ. ಕೆಲವರು ಯಶಸ್ಸು ಕಂಡರೂ, ಎಲ್ಲರಿಗೂ ಲಾಭವಾಗದು. ದೊಡ್ಡ ಪ್ರಮಾಣದಲ್ಲಿ ಬೆಳೆದಾಗಲಷ್ಟೇ ಉದ್ಯಮ ಎನಿಸಿಕೊಳ್ಳುತ್ತದೆ. ಸೋಷಿಯಲ್ ಮಿಡಿಯಾಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕೆ ಹೊರತು, ಅದೇ ಅಂತಿಮವಲ್ಲ.
ದುರುಪಯೋಗವೂ ಹೆಚ್ಚಿದೆ
| ಎಂ.ಎ. ಸುಬ್ರಹ್ಮಣ್ಯ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
- ಬೇರೆಲ್ಲ ಕ್ಷೇತ್ರಗಳಿಗಿಂತ ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಇವೆಲ್ಲ ಬೇಡ ಎಂದಿದ್ದರೆ ನಾವು ತಾಳೆಗರಿಯ ಪುಸ್ತಕದಲ್ಲಿಯೇ ಇರಬೇಕಿತ್ತು. ಪುಸ್ತಕದ ಯಾವ ಸ್ವರೂಪ ಕಳೆದು ಹೋಗಲಿದೆ ಎಂಬ ಭಯವಿತ್ತೋ ಅದಾಗಲೇ ಆಗಿ ಹೋಗಿದೆ. ಬ್ಯಾಂಕ್ನ ಲೆಡ್ಜರ್ಗಳೆಲ್ಲ ಮಾಯವಾಗಿ ವಿವರಗಳೆಲ್ಲ ಇಮೇಲ್ನಲ್ಲಿ ಸಿಗುತ್ತಿವೆ. ವ್ಯಾಪಾರ ವಹಿವಾಟುಗಳ ಖಾತೆ-ರ್ಕಿದಿಗಳೆಲ್ಲ ಕಂಪ್ಯೂಟರ್ನೊಳಗೆ ಬಂದು ಕುಳಿತಿವೆ. ರೋಗಿಗಳ ವಿವರಗಳು ಇದರಲ್ಲೇ ಸೇರಿಕೊಂಡಿವೆ. ನಿಘಂಟು- ಡಿಕ್ಷನರಿಗಳೆಲ್ಲ ಮೊಬೈಲ್ನೊಳಗೆ ಅಡಗಿವೆ.
- ಆದರೆ, ಆಧುನಿಕ ತಂತ್ರಜ್ಞಾನ ಅದೆಷ್ಟು ಸುಲಭ ತಂತ್ರಜ್ಞಾನಗಳನ್ನು ಒದಗಿಸಿದೆಯೋ ಅಷ್ಟೇ ಶಾಪ ಹಾಗೂ ದುರುಪಯೋಗದ ಅವಕಾಶಗಳನ್ನೂ ಒದಗಿಸಿದೆ. ಹಳೆಯದನ್ನೇ ಕದ್ದು, ತಮ್ಮ ಅನುಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳುವಂತೆ ಮಾಡಿದೆ. ಇಂಥವರಿಗೆ ಪ್ರಿಂಟ್ ಆನ್ ಡಿಮಾಂಡ್ ವರವಾಗಿ ನಾಲ್ಕೇ ಪ್ರತಿಗಳನ್ನು ಮುದ್ರಿಸಿಕೊಂಡು ಪ್ರಮೋಷನ್ ಪಡೆಯುತ್ತಿರುವ ಪ್ರಾಧ್ಯಾಪಕರು ಸಹ ನಮ್ಮಲ್ಲಿದ್ದಾರೆ.
- ಇನ್ನು, ಸೆಲ್ಪ್ ಪಬ್ಲಿಷಿಂಗ್ ಟ್ರೆಂಡ್ನಲ್ಲಿ ಮೋಸದ ಜಾಲವೇ ಸಕ್ರಿಯವಾಗಿದೆ. ನೀವು ಚೇತನ್ ಭಗತ್ ಆಗಬೇಕೆ? ನಿಮ್ಮ ಕಾದಂಬರಿಯನ್ನು ನೀವೇ ಪ್ರಕಾಶನ ಮಾಡಿ, ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿ ಎನ್ನುತ್ತ ಸೋಷಿಯಲ್ ಮೀಡಿಯಾದಲ್ಲಿ ಆಮಿಷವೊಡ್ಡುತ್ತಾರೆ. ತಮ್ಮ ಹೆಸರಿನಲ್ಲಿ ಪುಸ್ತಕವೊಂದು ಹೊರಬಂದು ತಾವು ಸಾಹಿತಿ ಎನಿಸಿಕೊಳ್ಳಲು ಬಯಸುವವರು ಇದಕ್ಕೆ ಬಲಿಪಶುಗಳಾಗುತ್ತಾರೆ. ಕವರ್ ಪೇಜ್, ಐಎಸ್ಬಿಎನ್ ಸಂಖ್ಯೆ, ಪುಸ್ತಕದ ಅಳತೆ ಮುಂತಾದವನ್ನು ಹೊಂದಿಸಿ ಹತ್ತಿಪ್ಪತ್ತು ಸಾವಿರ ರೂ.ಗಳನ್ನು ವಸೂಲಿ ಮಾಡುತ್ತಾರೆ. ಇಂಥ ಪುಸ್ತಕಗಳ ಹತ್ತಾರು ಪ್ರತಿಗಳನ್ನು ಮುದ್ರಿಸಿ ಆನ್ಲೈನ್ನಲ್ಲಷ್ಟೇ ಖರೀದಿಸಬಹುದೇ ಹೊರತು, ಓಪನ್ ಮಾರುಕಟ್ಟೆಯಲ್ಲಿ ಸಿಗದು. ಇದು ಅಧುನಿಕ ತಂತ್ರಜ್ಞಾನದ ಶಾಪವಾಗಿದೆ.
ಅಪ್ಡೇಟ್ ಆಗಬೇಕು
| ದೊಡ್ಡೇಗೌಡ ಸಪ್ನಾ ಬುಕ್ ಹೌಸ್, ಬೆಂಗಳೂರು
- ಕೋವಿಡ್ ಲಾಕ್ಡೌನ್ನಿಂದ ಓದುಗರ ಸಂಖ್ಯೆ ಹೆಚ್ಚಾಯ್ತು. ಹೊಸ ಓದುಗರು, ಲೇಖಕರು ಹುಟ್ಟಿಕೊಂಡರು. ನಮ್ಮಲ್ಲಿನ ಆನ್ಲೈನ್ ಮಾರಾಟ ಪ್ರಮಾಣ ಶೇಕಡ 48ರಷ್ಟು ಹೆಚ್ಚಾಯ್ತು. ಕನ್ನಡದ ಪುಸ್ತಕಗಳಿಗೆ ಯಥೇಚ್ಛ ಬೇಡಿಕೆಯೂ ಕಂಡುಬಂತು. ಇದು ನಮಗೆ ತೃಪ್ತಿ ನೀಡಿದ ವಿಚಾರವೂ ಹೌದು.
- ನಾವು ಕೂಡ ಬದಲಾಗಬೇಕು. ಅಪ್ಗ್ರೇಡೆಷನ್ ಕೂಡ ಬೇಕು. ಇ-ಬುಕ್, ಆಡಿಯೋ ಬುಕ್ಗಳಿಗೆ ಉತ್ತೇಜನ ಸಿಕ್ಕಿದೆ. ಜತೆಗೆ, ಸೋಷಿಯಲ್ ಮಿಡಿಯಾದಲ್ಲೂ ಸಾಕಷ್ಟು ಪ್ರಚಾರ ಸಿಗುತ್ತಿದ್ದು, ಚೇತರಿಕೆಯನ್ನು ಕಾಣುತ್ತಿದೆ. ಪ್ರಿಂಟ್ ಆನ್ ಡಿಮಾಂಡ್ ಜಾಸ್ತಿಯಾಗಿದೆ. ನಾವು ಕೂಡ ಇದನ್ನು ಪ್ರಾರಂಭಿಸಿದ್ದೇವೆ. ಕೃತಿಕಾರರಿಗೆ ಅಗತ್ಯವಿದ್ದಷ್ಟೇ ಪುಸ್ತಕಗಳನ್ನು ನೀಡುತ್ತೇವೆ. ಇಂಥವು ಅಕ್ಷರ ಜಗತ್ತಿಗೆ ಹೊಸ ಹೊಸ ಆಯಾಮಗಳನ್ನು ಒದಗಿಸುತ್ತಿವೆ. ಜತೆಗೆ, ಅಗತ್ಯವೆನಿಸಿಕೊಳ್ಳುತ್ತಿವೆ.
- ಸೆಲ್ಫ್ ಪಬ್ಲಿಕೇಷನ್ಗೂ ಮಾರ್ಗದರ್ಶನ ಬೇಕು. ಐಎಸ್ಬಿಎನ್ ಸಂಖ್ಯೆ ಪಡೆದುಕೊಳ್ಳುವುದು, ವಿನ್ಯಾಸ, ಮುದ್ರಣ, ಮಾರಾಟ ವ್ಯವಸ್ಥೆಗಳ ಬಗ್ಗೆ ಎಲ್ಲರೂ ತಿಳಿದುಕೊಂಡಿರಲು ಸಾಧ್ಯವಿಲ್ಲ. ಅಂಥವರಿಗೆ ಮಾರ್ಗದರ್ಶನ ಅಗತ್ಯ. ಉದಯೋನ್ಮುಖ ಲೇಖಕರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಿಂಟ್ ಆನ್ ಡಿಮಾಂಡ್ಗೆ ಮುಂದಿನ ದಿನಗಳಲ್ಲಿಯೂ ಬೇಡಿಕೆ ಇರಲಿದೆ.