ನ್ಯೂಸ್

ಸಂಪಾದಕೀಯ | ಸಮೂಹ ಸಾರಿಗೆಯೇ ಪರಿಹಾರ

ಮೋಹನ್​ ಶೆಟ್ಟಿ

ರಾಜಧಾನಿ ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡಿದ್ದರೂ ಇಲ್ಲಿನ ಸಂಚಾರಸಿಕ್ಕು ಉಂಟುಮಾಡುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಜನಸಾಮಾನ್ಯರು ದಿನಂಪ್ರತಿ ಟ್ರಾಫಿಕ್ ಸಮಸ್ಯೆಯಿಂದ, ಅದು ತೆಗೆದುಕೊಳ್ಳುತ್ತಿರುವ ಅಮೂಲ್ಯ ಸಮಯದಿಂದ ಕಂಗೆಟ್ಟಿದ್ದಾರೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, 1.23 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿವೆ. 2024-25ರ ಅವಧಿಯಲ್ಲೇ 4.68 ಲಕ್ಷ ದ್ವಿಚಕ್ರ ವಾಹನಗಳು ಮತ್ತು 1.45 ಲಕ್ಷ ನಾಲ್ಕು ಚಕ್ರ ವಾಹನಗಳು ಹೊಸದಾಗಿ ಸೇರ್ಪಡೆಯಾಗಿವೆ.

ಒಂದೇ ವರ್ಷದಲ್ಲಿ 7.22 ಲಕ್ಷ ಹೊಸ ವಾಹನಗಳು ರಸ್ತೆಗಿಳಿದಿವೆ. ಕರ್ನಾಟಕದಲ್ಲಿ ಇರುವ ಒಟ್ಟು ಕಾರುಗಳ ಪೈಕಿ ಶೇಕಡ 50ಕ್ಕಿಂತಲೂ ಅಧಿಕ ಬೆಂಗಳೂರಿನಲ್ಲೇ ನೋಂದಣಿಯಾಗಿವೆ ಎಂದು ಸಂಚಾರ ಪೊಲೀಸ್ ಇಲಾಖೆಯ ಅಂಕಿಅಂಶಗಳೇ ಹೇಳುತ್ತಿವೆ. 2020-21ರಲ್ಲಿ 1 ಕೋಟಿಯಷ್ಟಿದ್ದ ವಾಹನಗಳ ಸಂಖ್ಯೆ 2025ರ ಏಪ್ರಿಲ್​ನ ಹೊತ್ತಿಗೆ 1.23 ಕೋಟಿಗೆ ಏರಿಕೆಯಾಗಿದೆ. ಅಂದರೆ ತಿಂಗಳಿಗೆ ಸರಾಸರಿ 60 ಸಾವಿರ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಹೀಗಿರುವಾಗ ಸಂಚಾರ ಸಿಕ್ಕು ಸಮಸ್ಯೆ ತೀವ್ರಗೊಳ್ಳದೆ ಏನಾದೀತು? ಇರುವ ರಸ್ತೆಯಲ್ಲೇ ಹೆಚ್ಚೆಚ್ಚು ವಾಹನಗಳು ಸಂಚರಿಸಿದರೆ ಸುಗಮ ಸಂಚಾರ ಹೇಗೆ ತಾನೇ ಸಾಧ್ಯ? ಅಪಘಾತಗಳ ಪ್ರಮಾಣ, ಸಾವು-ನೋವಿನ ಪ್ರಮಾಣ ಕೂಡ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಸಮೂಹ ಸಾರಿಗೆಯೇ ಸೂಕ್ತ ಪರಿಹಾರವಾಗಿದ್ದು, ರಾಜ್ಯ ಸರ್ಕಾರ ಪ್ರೋತ್ಸಾಹಕ ಯೋಜನೆ ಕೈಗೊಂಡಿರುವುದು ಸ್ವಾಗತಾರ್ಹ.

ಸಮೂಹ ಸಾರಿಗೆ ಬಳಸಲು ಉತ್ತೇಜನ ದೊರೆತು, ಆ ನಿಟ್ಟಿನಲ್ಲಿ ಸೌಲಭ್ಯಗಳನ್ನು ದೊರಕಿಸಿದರೆ ರಾಜಧಾನಿಯ ಸಂಚಾರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇರಿಸಿದಂತೆ. ‘ಸಮೂಹ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, 2030ರ ಹೊತ್ತಿಗೆ ಶೇಕಡ 70ರಷ್ಟು ಮಂದಿಗೆ ಸಾರ್ವಜನಿಕ ಸಾರಿಗೆ ಸೇವೆ ಲಭ್ಯವಾಗುವಂತೆ ಮಾಡಲಾಗುವುದು. ಮುಂದಿನ ವರ್ಷ ಸಾರಿಗೆ ಸಂಸ್ಥೆಗೆ 4500 ಹೊಸ ಬಸ್​ಗಳು ಸೇರ್ಪಡೆಯಾಗಲಿವೆ. 95 ಕಿಮೀ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅಲ್ಲದೆ, ಬಿಎಂಟಿಸಿ ಬಸ್ ಮತ್ತು ಮೆಟ್ರೋ ಟಿಕೆಟ್​ನ್ನು ಒಂದೇ ವೇದಿಕೆ ಮೂಲಕ ಬುಕ್ ಮಾಡುವಂಥ ಆಪ್ ಕೂಡ ಸಿದ್ಧಪಡಿಸಲಾಗುತ್ತಿರುವುದು ಅನುಕೂಲಕರ. ಇದೊಂದು ಉತ್ತಮ ಯೋಜನೆಯೇ ಹೌದು.

ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಗೆ ಸಮೂಹ ಸಾರಿಗೆಯೇ ಮದ್ದು. ಇದು ಪರಿಸರಕ್ಕೂ ಪೂರಕ. ಭಾರತದಲ್ಲಿ ಮೆಟ್ರೋ ಜಾಲ ಈ ವರ್ಷದ ಆರಂಭದಲ್ಲೇ 1 ಸಾವಿರ ಕಿಲೋಮೀಟರ್ ಮೈಲಿಗಲ್ಲನ್ನು ತಲುಪಿದ್ದು, ಆಶಾವಾದ ಮೂಡಿಸಿದೆ. ಪ್ರಯಾಣವನ್ನು ಸರಾಗ, ಸುಗಮ ಹಾಗೂ ಪ್ರಯಾಣಿಕಸ್ನೇಹಿಗೊಳಿಸಿರುವುದು ಮೆಟ್ರೋದ ಹೆಗ್ಗಳಿಕೆ. ಸಮಯ ಹಾಗೂ ಶ್ರಮದ ಉಳಿತಾಯವೂ ಆಗುತ್ತಿದೆ. ಈ ವರ್ಷ ಬೆಂಗಳೂರಿನಲ್ಲಿ ಹಳದಿ ಮಾರ್ಗವೂ ಲೋಕಾರ್ಪಣೆಯಾಗಲಿರುವುದರಿಂದ ಮತ್ತಷ್ಟು ಪ್ರದೇಶಗಳನ್ನು ಒಳಗೊಳ್ಳಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರು ಸಂಚಾರ ಸಿಕ್ಕು ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ದೊರೆತರೆ ರಾಜಧಾನಿಯ ಬದುಕು ಇನ್ನಷ್ಟು ನಿರಾಳ. ಹೂಡಿಕೆ ಮಾಡುವವರಿಗೂ ಅನುಕೂಲ.