ನ್ಯೂಸ್

ಎರಡು ಪಂಚಾಯಿತಿಗೊಂದು ಪಬ್ಲಿಕ್ ಶಾಲೆ! ಸರ್ಕಾರದ ಹೊಸ ಆಲೋಚನೆ

ಬೆಂಗಳೂರು: ಪ್ರತಿ ಎರಡು ಪಂಚಾಯಿತಿಗಳನ್ನು ಸೇರಿಸಿ ಒಂದು ಪಬ್ಲಿಕ್ ಶಾಲೆ ಆರಂಭಿಸಲು ಉದ್ದೇಶಿಸಿದ್ದು, ಅದಕ್ಕೆ ಬೇಕಾಗಿರುವ ಜಾಗವನ್ನು ಸರ್ಕಾರ ನೀಡುತ್ತೇವೆ. ನೀವು ಅಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ. ಪ್ರಮುಖ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಈ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಪೊರೇಟ್ ಸಂಸ್ಥೆಗಳನ್ನು ಉದ್ದೇಶಿಸಿ ತಿಳಿಸಿದರು.

ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮಾತನಾಡಿದ ಅವರು ನೀವು ನಮಗೆ ಹಣ ನೀಡಬೇಡಿ, ನಾವು ಕಾರ್ಯಕ್ರಮದ ರೂಪುರೇಷೆ ನೀಡುತ್ತೇವೆ. ನೀವೇ ಕಟ್ಟಡವನ್ನು ನಿರ್ಮಾಣ ಮಾಡಿ. ಈಗಾಗಲೇ ನಾನು ವಿಪ್ರೋ, ಇಫೋಸಿಸ್ ನಂತಹ ಪ್ರಮುಖ ಸಂಸ್ಥೆಗಳ ಜತೆ ಮಾತನಾಡಿದ್ದು ಅವರು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲು ಸಿದ್ಧರಿದ್ದಾರೆ ಎಂದರು.

ಸರ್ಕಾರದಿಂದ ಒಂದೇ ಒಂದು ರೂಪಾಯಿ ವೆಚ್ಚವಿಲ್ಲದೇ ಮುಂದಿನ 3 ವರ್ಷಗಳಲ್ಲಿ ರಾಜ್ಯದ 2 ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಈ ಪಬ್ಲಿಕ್ ಶಾಲೆಗಳು ನಿರ್ಮಾಣವಾಗಲಿದೆ ಎಂದು ಹೇಳಿದರು.

ಕಾರ್ಪೊರೇಟ್ ಕಂಪನಿಗಳು ಸಿಎಸ್‌ಆರ್‌ಅನ್ನು ಬೇರೆಲ್ಲೂ ಹಣ ವೆಚ್ಚ ಮಾಡುವುದು ಬೇಡ. ಶಿಕ್ಷಣ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಲಿ ಎಂದರು.