Europe Heatwave 
ನ್ಯೂಸ್

ಹವಮಾನ ಬದಲಾವಣೆ ವಿರುದ್ಧ ಜನಾಕ್ರೋಶ: ಯುರೋಪ್​ನಲ್ಲಿ ಬಿಸಿಲಿನ ತಾಪಮಾನಕ್ಕೆ 35 ಸಾವಿರ ಮಂದಿ ಸಾವು

ಯುರೋಪ್​ನಲ್ಲಿ ಈ ವರ್ಷ ಕಂಡುಬಂದ ತೀವ್ರ ಶಾಖದ ಅಲೆ ಮತ್ತು ದೀರ್ಘಕಾಲದ ಬರಗಾಲದ ನಂತರ ನೆದರ್ಲ್ಯಾಂಡ್​ನಲ್ಲಿ ಸಾವಿರಾರು ಜನರು ಹವಾಮಾನ ಬದಲಾವಣೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರಾಜಧಾನಿ ಆಮ್​ಸ್ಟರ್​ಡ್ಯಾಮ್​ನ ಡ್ಯಾಮ್​ ಸ್ಕ್ವೇರ್​ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ 50 ಸಾವಿರ ಜನರು ಜಮಾಯಿಸಿದ್ದರು. ಹವಾಮಾನ ಬದಲಾವಣೆ, ಸುಡುವ ಬಿಸಿಲು ಮತ್ತು ಬರಗಾಲದ ಬಿಕ್ಕಟ್ಟನ್ನು ನಿಭಾಯಿಸಲು ಇನ್ನು ಕೇವಲ ಭರವಸೆಗಳನ್ನು ನೀಡದೆ, ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕಟ್ಟುನಿಟ್ಟಾದ ನೀತಿಗಳನ್ನು ಜಾರಿಗೆ ತರಬೇಕು ಎಂದು ಜನರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಈ ಬೃಹತ್​ ಪ್ರತಿಭಟನೆಯು ಶೀಘ್ರವೇ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಯುರೋಪ್​ನಲ್ಲಿ ಮೇ ತಿಂಗಳಿನಿಂದ ಆಗಸ್ಟ್​ವರೆಗೆ ನಿರಂತರವಾಗಿ 40-46 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಗಿದ್ದು, ಇದರಿಂದ ಇಡೀ ಯುರೋಪ್​ನಲ್ಲಿ 35,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಬ್ರಿಟನ್​, ಜರ್ಮನಿ, ಫ್ರಾನ್ಸ್​, ನೆದರ್ಲ್ಯಾಂಡ್​, ಇಟಲಿ, ಸ್ಪೇನ್​ ಮತ್ತು ಸ್ವೀಡನ್​ ಸೇರಿದಂತೆ ಪ್ರಮುಖ ಯುರೋಪಿಯನ್​ ರಾಷ್ಟ್ರಗಳಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್​ನಲ್ಲಿ ಲಂಡನ್​ನ ಪ್ರಮುಖ ಹೆದ್ದಾರಿಗಳು, ಸಂಸತ್​ ಭವನದ ಆವರಣದಲ್ಲಿ ಪ್ರತಿಭಟನೆಗಳು ನಡೆದಿವೆ. ಅತಿಯಾದ ಗಣಿಗಾರಿಕೆ ಪರಿಸರಕ್ಕೆ ಹಾನಿಮಾಡುತ್ತಿದೆ, ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜರ್ಮನಿಯ ಬರ್ಲಿನ್​, ಮ್ಯೂನಿಚ್​, ಫ್ರಾಂಕ್​ಫರ್ಟ್​ನಲ್ಲಿ ಜನರು ಬೀದಿಗಿಳಿದಿದ್ದಾರೆ. ನೆದರ್ಲ್ಯಾಂಡ್​ನ ಹೇಗ್​ ಮತ್ತು ಆಮ್​ಸ್ಟರ್​ಡ್ಯಾಮ್​ನ ಶಿಫೋಲ್​ನಲ್ಲಿ ಜನಾಕ್ರೋಶ ತೀವ್ರಗೊಂಡಿದ್ದು, ಪಳೆಯುಳಿಕೆ ಇಂಧನಗಳಿಗೆ ನೀಡುವ ಸರ್ಕಾರಿ ಸಬ್ಸಿಡಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಫ್ರಾನ್ಸ್​, ಇಟಲಿ, ಸ್ವೀಡನ್​ನಲ್ಲಿ ಕೂಡ ಹೆಚ್ಚುತ್ತಿರುವ ತಾಪಮಾನ ತಡೆಯಲು ಸರ್ಕಾರ ಸೂಕ್ತ ನೀತಿಗಳನ್ನು ಜಾರಿಗೆ ತರಬೇಕು ಎಂಬ ಜನಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಗಳ ಫಲವಾಗಿ ಯುರೋಪಿಯನ್​ ಯೂನಿಯನ್​ ತನ್ನ "ಗ್ರೀನ್​ ಡೀಲ್​' (Green Deal) ಅಡಿಯಲ್ಲಿ ಕಠಿಣ ಗುರಿಗಳನ್ನು ನಿಗದಿಪಡಿಸಿದೆ. 2035ರ ವೇಳೆಗೆ ಪೆಟ್ರೋಲ್​/ಡೀಸೆಲ್​ ಕಾರುಗಳ ಮಾರಾಟ ನಿಷೇಧ, ನವೀಕರಿಸಬಹುದಾದ ಇಂಧನ ಬಳಕೆಯ ಪ್ರಯತ್ನಗಳಿಗೆ ವೇಗ ಸಿಕ್ಕಿದೆ.
ಯುರೋಪ್​ ಖಂಡದಾದ್ಯಂತ 2026ರ ಜೂನ್​, ಜುಲೈ ಮತ್ತು ಆಗಸ್ಟ್​ ತಿಂಗಳಿನಲ್ಲಿ ತಾಪಮಾನ ಹೆಚ್ಚಾಗಲು "ಹೀಟ್​ ಡೋಮ್​' ಪ್ರಮುಖ ಕಾರಣವಾಗಿದೆ. ಭೂಮಿಯ ವಾತಾವರಣದ ಮೇಲ್ಭಾಗದಲ್ಲಿ ತೀವ್ರವಾದ ಹೆಚ್ಚಿನ ಒತ್ತಡದ ವಲಯ ಸೃಷ್ಟಿಯಾಗಿ, ಅದು ಒಂದೇ ಕಡೆ ಸ್ಥಿರವಾಗಿ ನಿಂತಾಗ "ಹೀಟ್​ ಡೋಮ್​' ಉಂಟಾಗುತ್ತದೆ. ಇದು ಬಿಸಿಯಾದ ಗಾಳಿಯು ಮೇಲಕ್ಕೆ ಹೋಗಿ ಹೊರಹೋಗದಂತೆ ತಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಬಿಸಿ ಅನ್ನದ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿದಾಗ ಹೇಗೆ ಒಳಗಿನ ಉಗಿ ಹೊರಗೆ ಹೋಗದೆ ಅಲ್ಲೆ ಅಡಗಿರುತ್ತದೆಯೋ, ಹಾಗೆಯೇ ಈ ಹೆಚ್ಚಿನ ಒತ್ತಡದ ವಲಯವು ಬಿಸಿ ಗಾಳಿಯನ್ನು ಭೂಮಿಗೆ ಹತ್ತಿರದಲ್ಲೆ ಲಾಕ್​ ಮಾಡಿಬಿಡುತ್ತದೆ. ಮೋಡಗಳು ಸೃಷ್ಟಿಯಾಗದ ಕಾರಣ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು, ದಿನದಿಂದ ದಿನಕ್ಕೆ ತಾಪಮಾನವು ಕುದಿಯುವ ಮಟ್ಟಕ್ಕೆ ಏರುತ್ತ ಹೋಗುತ್ತದೆ. ಯುರೋಪಿನ ಫ್ರಾನ್ಸ್​, ಸ್ಪೇನ್​, ಜರ್ಮನಿ ಮತ್ತು ಯುಕೆ ದೇಶಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ನಿಂದ 46 ಡಿ.ಸೆ. ದಾಟಿದೆ.
ಅಪಾಯಕಾರಿ ಪ್ರದೇಶಗಳು
ಈ ವರ್ಷ ಯುರೋಪ್​ನ ಹಲವು ದೇಶಗಳಲ್ಲಿ ಭೀಕರ ಕಾಳ್ಗಿಚ್ಚು ಸಂಭವಿಸಿದೆ. ಇದರಿಂದ 6.60 ಲಕ್ಷ ಹೆಕ್ಟೇರ್​ ಭೂಮಿ ಸುಟ್ಟು ಕರಕಲಾಗಿದ್ದು, ಅಂದಾಜು 1.2 ಕೋಟಿ ಟನ್​ ಬೆಳೆಗಳು ನಾಶವಾಗಿವೆ. ಕಾಳ್ಗಿಚ್ಚಿನ ಗರಿಷ್ಠ ಅಪಾಯವಿರುವ 100 ಪ್ರದೇಶಗಳನ್ನು ಇಯು ಗುರುತಿಸಲಿದೆ. ಈ ಪ್ರದೇಶಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ಅಪಾಯ ಮತ್ತು ಅದರಿಂದ ರಕ್ಷಿಸಿಕೊಳ್ಳುವ ಸನ್ನದ್ಧತೆಯನ್ನು ಪರಿಶೀಲಿಸಲಾಗುತ್ತದೆ. ಪ್ರಸ್ತುತ ಇಯು ಬಳಿ ಬೆಂಕಿ ನಂದಿಸುವ ವಿಮಾನಗಳ ಸಣ್ಣ ಪಡೆಯೊಂದಿದೆ. ಕಾಳ್ಗಿಚ್ಚು ಸಂಭವಿಸಿದಾಗ ಸದಸ್ಯ ರಾಷ್ಟ್ರಗಳ ನಡುವೆ ವಿಮಾನಗಳು, ನೀರಿನ ಟ್ಯಾಂಕರ್​ಗಳು ಮತ್ತು ಪರಿಹಾರ ಸಿಬ್ಬಂದಿಯನ್ನು ಕಳುಹಿಸುವ ವ್ಯವಸ್ಥೆಯನ್ನು ಇಯು ಮಾಡುತ್ತಿದೆ. ಈಗ ಈ ಸಂಪೂರ್ಣ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ. ಈ ಯೋಜನೆಯನ್ನು ಉತ್ತಮಗೊಳಿಸಲು ಅನುಭವಿ ಅಗ್ನಿಶಾಮಕ ದಳದವರು ಮತ್ತು ಪರಿಹಾರ ತಂಡಗಳಿಂದಲೂ ಸಲಹೆಗಳನ್ನು ಪಡೆಯಲಾಗುತ್ತಿದೆ.
ಈ ವರ್ಷ ಯುರೋಪ್​ನಲ್ಲಿ ತೀವ್ರವಾದ ಬಿಸಿಗಾಳಿಯು ಭಾರಿ ಹಾನಿಯನ್ನು ಉಂಟುಮಾಡಿದೆ. ಬಿಸಿಗಾಳಿಯ ಆರ್ಭಟಕ್ಕೆ ಈವರೆಗೆ 35 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ನದಿಗಳು ಬತ್ತಿಹೋಗಿವೆ ಮತ್ತು ಕಾಳ್ಗಿಚ್ಚು ಸಂಭವಿಸಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯುರೋಪಿಯನ್​ ಒಕ್ಕೂಟವು (ಇಯು) ಈಗ ಬಿಸಿಲನ್ನೂ ಒಂದು ದೊಡ್ಡ ವಿಕೋಪವೆಂದು ಪರಿಗಣಿಸಿ, ಇದನ್ನು ಎದುರಿಸಲು ಹೊಸ ವ್ಯವಸ್ಥೆಯನ್ನು ರೂಪಿಸಲು ಸಿದ್ಧತೆ ನಡೆಸುತ್ತಿದೆ.
"ಈ ವರ್ಷದ ಬೇಸಿಗೆಯು ಯುರೋಪ್​ಗೆ ದೊಡ್ಡ ಪಾಠವನ್ನು ಕಲಿಸಿದೆ' ಎಂದು ಯುರೋಪಿಯನ್​ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್​ ಡೆರ್​ ಲೇಯೆನ್​ ಹೇಳಿದ್ದಾರೆ.
ತೀವ್ರವಾದ ಬಿಸಿಲಿನ ಕಾರಣದಿಂದಾಗಿ ಯುರೋಪ್​ನ ಅನೇಕ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇವುಗಳಲ್ಲಿ ಡ್ಯಾನ್ಯೂಬ್​, ರೈನ್​ ಮತ್ತು ಫ್ರಾನ್ಸ್​ನ ಗ್ಯಾರೋನ್​ ನದಿಗಳು ಸೇರಿವೆ. ಹಲವಾರು ಆಸ್ಪತ್ರೆಗಳು ಮತ್ತು ಹಿರಿಯ ನಾಗರಿಕರ ಆರೈಕೆ ಕೇಂದ್ರಗಳು (ಕೇರ್​ ಹೋಮ್ಸ್​) ತೀವ್ರ ಶಾಖಕ್ಕೆ ತುತ್ತಾಗಿದ್ದು, ಅಲ್ಲಿ ಉಳಿದುಕೊಳ್ಳುವುದೇ ಕಷ್ಟಕರವಾಗಿ ಪರಿಣಮಿಸಿತು ಎಂದಿದ್ದಾರೆ ಲೇಯೆನ್​. ಅವರ ಪ್ರಕಾರ, ಬಿಸಿಲಿನ ಪ್ರಭಾವವು ಆರಂಭಿಕ ಅಂದಾಜಿಗಿಂತಲೂ ಬಹಳ ಹೆಚ್ಚಾಗಿತ್ತು.
ದಾಖಲೆ ಮುರಿದ ಉಷ್ಣಾಂಶ
ಯುರೋಪ್​ನಲ್ಲಿ ಈ ವರ್ಷದ ತೀವ್ರ ಬಿಸಿಲು ಹಲವು ದಾಖಲೆಗಳನ್ನು ಮುರಿದಿದೆ. ಇಟಲಿಯ ಸಿಸಿಲಿಯಲ್ಲಿ 2026ರ ಜುಲೈ 22ರಂದು ತಾಪಮಾನವು 46.5 ಡಿಗ್ರಿ ಸೆಲ್ಸಿಯಸ್​ಗೆ ತಲುಪಿತ್ತು. ಫ್ರಾನ್ಸ್​ನ ಪಿಸೋಸ್​ನಲ್ಲಿ 44.3 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಅದೇ ಸಮಯದಲ್ಲಿ, ಸ್ಪೇನ್​ನ ಹಲವು ಭಾಗಗಳಲ್ಲಿ ತಾಪಮಾನವು ಸತತವಾಗಿ 42 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಾಗಿತ್ತು.
ಯುರೋಪ್​ ಏಕೆ ಬಿಸಿಯಾಗುತ್ತಿದೆ?
ಯುರೋಪ್​ ಆರ್ಕ್ಟಿಕ್​ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೆ. ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ಆರ್ಕ್ಟಿಕ್​ ಹೆಚ್ಚು ವೇಗವಾಗಿ ಬಿಸಿಯಾಗುತ್ತಿದೆ. ಇದರ ಪರಿಣಾಮ ಯುರೋಪ್​ನ ಹವಾಮಾನ ಮತ್ತು ತಾಪಮಾನದ ಮೇಲೂ ಆಗುತ್ತಿದೆ.
ನೀರಿಗೆ ಹೋಲಿಸಿದರೆ ಭೂಭಾಗವು ಬೇಗನೆ ಬಿಸಿಯಾಗುತ್ತದೆ. ಯುರೋಪ್​ನ ಹೆಚ್ಚಿನ ಭಾಗವು ಭೂಪ್ರದೇಶವಾಗಿರುವುದರಿಂದ, ಇಲ್ಲಿ ತಾಪಮಾನವು ಶೀಘ್ರವಾಗಿ ಏರುತ್ತಿದೆ.
ಯುರೋಪ್​ನಲ್ಲಿ ಗಾಳಿ ಮತ್ತು ಜೆಟ್​ ಸ್ಟ್ರೀಮ್​ನ ಪಥದಲ್ಲಿನ ಬದಲಾವಣೆಗಳು ಸಹ ಶಾಖವನ್ನು ಹೆಚ್ಚಿಸುತ್ತಿವೆ. ಹಲವು ಬಾರಿ ಬಿಸಿಗಾಳಿಯು ಒಂದೇ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಸಿಲುಕಿಕೊಳ್ಳುತ್ತಿದೆ. ಇದರಿಂದಾಗಿ ಬಿಸಿಗಾಳಿ ಇನ್ನಷ್ಟು ತೀವ್ರಗೊಂಡು ಹೆಚ್ಚು ಕಾಲ ಮುಂದುವರಿಯುತ್ತದೆ.
ಉಷ್ಣ ಗಾಳಿಯ ಸಮಸ್ಯೆ ಇಷ್ಟು ತೀವ್ರವಾಗಲು ಹವಾಮಾನ ಬದಲಾವಣೆಯೇ ಮೂಲ ಕಾರಣ. ಭೂಮಿಯ ಸರಾಸರಿ ತಾಪಮಾನ ಏರಿಕೆಯಾಗುತ್ತಿರುವುದರಿಂದ, ಈ ಹಿಂದೆ ಅಪರೂಪವಾಗಿದ್ದ ಬಿಸಿಗಾಳಿಯ ಘಟನೆಗಳು ಈಗ ಸಾಮಾನ್ಯವಾಗುತ್ತಿವೆ. ಆರ್ಕ್ಟಿಕ್​ ಪ್ರದೇಶವು ವೇಗವಾಗಿ ಬಿಸಿಯಾಗುತ್ತಿರುವುದರಿಂದ ಜೆಟ್​ ಸ್ಟ್ರೀಮ್​ಗಳು (ಗಾಳಿಯ ಪ್ರವಾಹಗಳು) ದುರ್ಬಲಗೊಳ್ಳುತ್ತಿವೆ. ಇದರಿಂದ ಒಂದು ಪ್ರದೇಶದ ಮೇಲಿರುವ ಬಿಸಿ ಗಾಳಿಯು ಬೇಗನೆ ಚಲಿಸದೆ ಅಲ್ಲೆ ದೀರ್ಘಕಾಲ ಉಳಿದು "ಹೀಟ್​ ಡೋಮ್​' ಸೃಷ್ಟಿಸುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಹೀಟ್​ ವೇವ್​ಗಳು ಬರುವ ಅವಧಿ ಹೆಚ್ಚಾಗಿದೆ. ಮೊದಲು 3-4 ದಿನ ಇರುತ್ತಿದ್ದ ಬಿಸಿಗಾಳಿ ಈಗ 10-15 ದಿನಗಳವರೆಗೆ ಮುಂದುವರಿಯುತ್ತಿದೆ. ಸಮುದ್ರದ ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದ ಕರಾವಳಿ ನಗರಗಳಲ್ಲಿ ರಾತ್ರಿಯ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದ್ದು, ಇದು ಹವಾಮಾನದ ಸಮತೋಲನವನ್ನು ತಪ್ಪಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡದಿದ್ದರೆ ಈ ಹೀಟ್​ ವೇವ್​ಗಳ ತೀವ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ.
ತೀವ್ರ ಹಾಹಾಕಾರ
ಪ್ರಪಂಚದ ಅತ್ಯಂತ ತಂಪಾದ ವಾಸಯೋಗ್ಯ ಮಹಾದ್ವೀಪಗಳಲ್ಲಿ ಯುರೋಪ್​ ಒಂದಾಗಿದೆ. ಇಲ್ಲಿನ ಸಂಪೂರ್ಣ ಮೂಲಸೌಕರ್ಯ ವ್ಯವಸ್ಥೆಯನ್ನು ಚಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆಯೇ ಹೊರತು ಇಂತಹ ಪ್ರಾಣಾಂತಿಕ ಬಿಸಿಲಿಗಲ್ಲ. ಯುರೋಪ್​ನ ಪ್ರಸ್ತುತ ಮೂಲಸೌಕರ್ಯಗಳು ಈ ಮಟ್ಟದ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಯುರೋಪ್​ನಲ್ಲಿರುವ ಬಹುತೇಕ ಮನೆಗಳನ್ನು ಚಳಿಯಿಂದ ರಕ್ಷಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ಇದು ಶಾಖವನ್ನು ಒಳಗೆ ಹಿಡಿದಿಟ್ಟುಕೊಳ್ಳುತ್ತದೆ. ಬಹುತೇಕ ಛಾವಣಿಗಳು ಟಿನ್​ ಅಥವಾ ಲೋಹ (ಕಬ್ಬಿಣ)ದಿಂದ ಮಾಡಲ್ಪಟ್ಟಿವೆ. ಅತಿಯಾದ ಬಿಸಿಲು ಬಂದಾಗ ಈ ಮನೆಗಳು "ಭಟ್ಟಿ'ಯಂತೆ (ಓವನ್​) ಬದಲಾಗುತ್ತವೆ. ಇವು ಹಗಲಿನಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ, ರಾತ್ರಿಯಲ್ಲೂ ಮನೆಗಳು ತಂಪಾಗುವುದಿಲ್ಲ. ಅಮೆರಿಕದ ಕಾರ್ನೆಲ್​ ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್​ ವಿಭಾಗದ ತಜ್ಞರ ಪ್ರಕಾರ, ರಾತ್ರಿಯ ತಾಪಮಾನವೂ ಹೆಚ್ಚಾದಾಗ, ಮನೆಗಳು ದಿನದಿಂದ ದಿನಕ್ಕೆ ಮತ್ತಷ್ಟು ಕಾಯುತ್ತವೆ. ಇದರಿಂದ ಮಾನವನ ದೇಹಕ್ಕೆ ವಿಶ್ರಾಂತಿ ಸಿಗದೆ ಆರೋಗ್ಯ ಹದಗೆಡುತ್ತದೆ.