ಭಾರತದಲ್ಲಿ ಪಬ್ಜಿ ಗೇಮ್ಗೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿರುವುದರಿಂದಾಗಿ ಪಬ್ಜಿ ಒಡೆತನದ ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿ ತನ್ನ ಮಾರುಕಟ್ಟೆ ಮೌಲ್ಯದಲ್ಲಿ 14 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿದೆ.
ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಟೆನ್ಸೆಂಟ್ ಷೇರುಗಳ ಮೌಲ್ಯ ಶೇ. 2 ಕುಸಿತ ಕಂಡಿದೆ. ಇದಕ್ಕೂ ಮೊದಲು ಎರಡು ವಹಿವಾಟು ದಿನಗಳಲ್ಲಿ ಟೆನ್ಸೆಂಟ್ ಷೇರುಗಳ ಮೌಲ್ಯ ಸತತವಾಗಿ ಏರಿಕೆ ಕಂಡಿತ್ತು.
ಚೀನಾ ಆಪ್ಗಳು ಭದ್ರತೆಗೆ ಮಾರಕ
ನಿಷೇಧಿತ 118 ಅಪ್ಲಿಕೇಷನ್ಗಳು ದೇಶದ ಭದ್ರತೆಗೆ ಮಾರಕವಾಗಿದ್ದವು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ]ೕವಾಸ್ತವ್ ಹೇಳಿದ್ದಾರೆ. ಇಂಟರ್ನೆಟ್ ಮತ್ತು ಡಿಜಿಟಲ್ ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡಂತೆ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಭಾರತವು ಅತ್ಯಂತ ಮುಕ್ತ ಆಡಳಿತ ಹೊಂದಿದೆ. ಆದರೆ ಕೇಂದ್ರ ಹೊರಡಿಸಿದ ನಿಯಮಗಳನ್ನು ಪಾಲಿಸಬೇಕಾದ ಜವಾಬ್ದಾರಿ ಕಂಪನಿಗಳ ಮೇಲಿದೆ.
ನಾವು ಎಲ್ಲ ಕಂಪನಿಗಳನ್ನು ಸ್ವಾಗತಿಸುತ್ತೇವೆ. ಆದರೆ ಅವುಗಳು ನಮ್ಮ ನಿಯಮಗಳನ್ನು ಒಪ್ಪಿಕೊಳ್ಳಬೇಕು. ಭಾರತದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ಈ ಆಪ್ಗಳನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.