ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಸೂಚನೆ ಮೇರೆಗೆ ಲಿಖಿತ ಪರೀಕ್ಷೆ ಮಾದರಿಯಲ್ಲಿ ನಡೆಸಲು ಉದ್ದೇಶಿಸಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆದೇಶಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಡೆ ನೀಡಿದೆ.
ಈ ಸಂಬಂಧ ಬುಧವಾರ ಪ್ರಕಟಣೆ ಹೊರಡಿಸಿರುವ ಮಂಡಳಿ ಅಧ್ಯಕ್ಷರು, 2025ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಯಾದೃಚ್ಚೀಕರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಅ.1ರಿಂದ 5ರವರೆಗೆ ಮಂಡಳಿ ಹೊರಡಿಸಿದ್ದ ಸುತ್ತೋಲೆಗಳನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಯಥಾಪ್ರಕಾರ ಹಿಂದಿನ ವರ್ಷಗಳಂತೆ ಪರೀಕ್ಷೆಗಳು ಆಯಾ ಕಾಲೇಜಿನಲ್ಲಿಯೇ ನಡೆಯಲಿವೆ.
ಈ ನಡುವೆ ಇಲಾಖೆ ನಡುವೆಯೇ ಸಮನ್ವಯ ಕೊರತೆ ಇತ್ತು. ಸರಿಯಾಗಿ ಚರ್ಚಿಸದೆ ಆದೇಶ ಹೊರಡಿಸಲಾಗಿತ್ತು. ಸಚಿವರ ಗಮನಕ್ಕೆ ಬಾರದೆ ಆದೇಶ ಹೊರಡಿಸಿದ್ದರಿಂದ ಈಗ ಸಚಿವರು ಆದೇಶಕ್ಕೆ ತಡೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ಕೆಲವು ಕಾಲೇಜುಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಪ್ರಾಯೋಗಿಕ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಿಖಿತ ಪರೀಕ್ಷೆ ಮಾದರಿಯಲ್ಲೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಪರೀಕ್ಷಾ ಮಂಡಳಿಯು ಅ.1ರಂದು ಸುತ್ತೋಲೆ ಹೊರಡಿಸಿತ್ತು.
ಇದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ಪಿಯುಸಿ ಉಪನ್ಯಾಸಕರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಪ್ರಾಯೋಗಿಕ ಪರೀಕ್ಷಾ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದೇ ಬಹುತೇಕ ಕಾಲೇಜುಗಳ ವಿರೋಧಕ್ಕೆ ಕಾರಣವಾಗಿತ್ತು.
ಇದಾದ ನಂತರ ಪರೀಕ್ಷೆಯನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂದು ಅ.5ರಂದು ಪರಿಷ್ಕೃತ ಸುತ್ತೋತೆ ಹೊರಡಿಸಿತ್ತು. ಗ್ರಾಮೀಣ ಭಾಗದಲ್ಲಿ ಒಂದೇ ಕಾಲೇಜಿದ್ದರೆ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದೀಗ ಆದೇಶವನ್ನೇ ಹಿಂಪಡೆದಿದೆ.