ನ್ಯೂಸ್

ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಬೇಡ; ಕರೆ ಮಾಡಿ ಮಾರ್ಗದರ್ಶನ ಪಡೆಯಿರಿ

Mandara

ಬೆಂಗಳೂರು: ರಾಜ್ಯದಲ್ಲಿ ಮೇ 4ರವರೆಗೆ ಸೆಮಿಲಾಕ್ ಡೌನ್ ಇರುವುದರಿಂದ ಪಿಯು ಭೌತಿಕ ತರಗತಿಗಳನ್ನು ರದ್ದು ಮಾಡಿ ಆನ್‌ಲೈನ್ ತರಗತಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಬೇಕು. ಫ್ರೀ-ರೆಕಾರ್ಡ್ ವಿಡಿಯೋ ತರಗತಿಗಳನ್ನು ಮುಂದುವರಿಸಬೇಕು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಬೇಕು ಎಂದು ಉಪನ್ಯಾಸಕರಿಗೆ ಸೂಚಿಸಿದೆ.

ವಿದ್ಯಾರ್ಥಿಗಳು ಯಾವುದೇ ವಿಷಯಗಳಲ್ಲಿ ಸಮಸ್ಯೆ ಬಂದರೆ ತಮ್ಮ ಕಾಲೇಜಿನ ಸಂಬಂಧಪಟ್ಟವರ ವಿಷಯ ಉಪನ್ಯಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಏ.28ರಿಂದ ಮೇ 5ರವರೆಗೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸೂಚಿಸಿದೆ. ಮೇ 25 ತಾತ್ವಿಕ ಪರೀಕ್ಷೆ ಇದೆ. ಈ ಪರೀಕ್ಷೆಗಳನ್ನು ಇಲಾಖೆಯೇ ನಡೆಸುವುದರಿಂದ ಎಲ್ಲ ಕಾಲೇಜುಗಳಲ್ಲಿ ಶೇ.50 ಉಪನ್ಯಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಪ್ರಾಂಶುಪಾಲರು ಈ ಬಗ್ಗೆ ಸರಿಯಾದ ವೇಳಾಪಟ್ಟಿ ತಯಾರಿಸಿ ಉಪನ್ಯಾಸಕರನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.

ಈ ಸುತ್ತೋಲೆಯು ತಾತ್ಕಾಲಿಕವಾಗಿದ್ದು, ಕರೊನಾ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ರಾಜ್ಯ ಸರ್ಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಹಾಗೂ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಇಲಾಖೆಯ ನಿರ್ದೇಶಕರು ಸುತ್ತೋಲೆಯಲ್ಲಿ ರಾಜ್ಯ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದ್ದಾರೆ.