Vikalpa - ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಸಿನಿಮಾ "ವಿಕಲ್ಪ'. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ನಟ, ನಿರ್ದೇಶಕ ಪೃಥ್ವಿರಾಜ್ ಪಾಟೀಲ್. ಎರಡು ದಶಕಗಳ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ಪಳಗಿ, ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೃಥ್ವಿರಾಜ್ "ವಿಕಲ್ಪ' ಮೂಲಕ ಸಿನಿಮಾ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ.
ಚಿತ್ರದ ಬಗ್ಗೆ, ""ವಿಕಲ್ಪ' ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳ ಜತೆಗೆ ನವಿರಾದ ಹಾಸ್ಯ, ಮನರಂಜನೆಗೂ ಹೆಚ್ಚು ಒತ್ತು ಕೊಟ್ಟು ಕಥೆ ಮಾಡಿದ್ದೇವೆ. ಚಿತ್ರಕ್ಕೆ ಕಥೆಯೇ ನಾಯಕ. ಪ್ರತಿ ಪಾತ್ರಕ್ಕೂ ಪ್ರಾಮುಖ್ಯವಿದೆ' ಎಂದು ಮಾಹಿತಿ ನೀಡುತ್ತಾರೆ ಪೃಥ್ವಿರಾಜ್. ಹಲವು ನುರಿತ ಮಾನಸಿಕ ವೈದ್ಯರ ಸಲಹೆಯನ್ನು ಪಡೆದು ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರೀಕರಿಸಿರುವುದು ವಿಶೇಷ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸೇರಿ ದೂರದ ಸಿಂಗಾಪುರ, ನೆದರ್ಲೆಂಡ್ನಲ್ಲೂ ಶೂಟಿಂಗ್ ನಡೆಸಲಾಗಿದೆ.
ಪೃಥ್ವಿರಾಜ್ ಪಾಟೀಲ್ ಜತೆ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಹರಿಣಿ ಶ್ರೀಕಾಂತ್ ಜತೆಗೆ ಮಲೆನಾಡಿನ ರಂಗಭೂಮಿ ಕಲಾವಿದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಿರೀಶ್ ಹೆಗಡೆ, ಗಣಪತಿ ಎ.ಆರ್, ರಾಜ್ಯಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆಮುರ್ಗಂ ಸಂಕಲನ, ಸಂವತ್ಸರ ಸಂಗೀತದಲ್ಲಿ "ವಿಕಲ್ಪ' ಮೂಡಿಬರಲಿದ್ದು, ಸದ್ಯ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.