ನ್ಯೂಸ್

ಸಂಪಾದಕೀಯ | ಸಮಗ್ರ ತನಿಖೆಯಾಗಲಿ; ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ

ಇದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರಿ ನೇಮಕಾತಿಗಳು ವಿವಾದದಿಂದ ಹೊರತಾಗದೆ ಇರುವುದು, ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬ ಆತಂಕಭರಿತ ಪ್ರಶ್ನೆಯನ್ನು ಸೃಷ್ಟಿಸಿದೆ. ಭ್ರಷ್ಟಾಚಾರ, ಅವ್ಯವಹಾರ, ಇತರ ಅಪಸವ್ಯಗಳೇ ಸದ್ದು ಮಾಡುತ್ತಿದ್ದು, ಕಷ್ಟಪಟ್ಟು ಓದಿ, ನಿಷ್ಠೆಯಿಂದ ಸಿದ್ಧತೆ ಮಾಡಿಕೊಂಡ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದಂತೂ ಸ್ಪಷ್ಟ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೇಮಕಾತಿಯಲ್ಲೇ ಈಗ ಅಕ್ರಮದ ಸದ್ದು ಕೇಳಿಬಂದಿದೆ. ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ಕೆಲ ಆರೋಪಿಗಳ ಬಂಧನವೂ ಆಗಿದೆ. ಆದರೆ, ಇದೆಲ್ಲವೂ ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ. ಏಕೆಂದರೆ, ಮಧ್ಯವರ್ತಿಗಳ ಜತೆಗೆ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ನೇಮಕಾತಿಗೆ ಕೈಜೋಡಿಸುತ್ತಿದ್ದಾರೆ ಮತ್ತು ಸಬ್ ಇನ್​ಸ್ಪೆಕ್ಟರ್ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಡೀಲ್ ನಡೆಯುತ್ತದೆ ಎಂಬ ಆರೋಪ ಕೇಳಿಬಂದಿರುವುದು ಈ ಜಾಲದ ವ್ಯಾಪಕತೆಗೆ ಸಾಕ್ಷಿ. ಈಗಿನ 545 ಎಸ್​ಐ ಹುದ್ದೆ ನೇಮಕಾತಿಯಲ್ಲೂ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ ಸಿಬ್ಬಂದಿ ಸೇರಿ ಕೆಲ ಅಧಿಕಾರಿಗಳು ಅಕ್ರಮಕ್ಕೆ ಬೆಂಬಲ ಕೊಟ್ಟಿರುವ ವಿಚಾರ ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿರುವುದು ಗಮನಾರ್ಹ.

‘ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ಪೂರ್ವಾಪರ ಪರಿಶೀಲನೆ ನಡೆಸಲಾಗುವುದು. ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಅಭ್ಯರ್ಥಿ ಮತ್ತು ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ರಾಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭಾನುವಾರ ತಿಳಿಸಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಲೇ ಬೇಕು. ಮುಖ್ಯವಾಗಿ, ತನಿಖೆಯು ರಾಜಕೀಯ ಒತ್ತಡ ಅಥವಾ ಇತರ ಕಾರಣಗಳಿಂದ ಮಧ್ಯದಲ್ಲೇ ದಾರಿ ತಪ್ಪದೆ, ರ್ತಾಕ ಅಂತ್ಯ ಕಾಣುವಂತಾಗಬೇಕು. ನೈಜ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡಬಾರದು. ಈ ಮೊದಲು ಕೂಡ ಪೊಲೀಸ್ ನೇಮಕಾತಿ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳು ನಡೆದಿದ್ದವು. ಒಟ್ಟಾರೆ ಈ ಬೆಳವಣಿಗೆಗಳಿಂದ ಯುವ ಉದ್ಯೋಗಾಕಾಂಕ್ಷಿಗಳಂತೂ ಭ್ರಮನಿರಸನ ಹೊಂದಿದ್ದಾರೆ. ಕೇಂದ್ರದ ಹುದ್ದೆಗಳಿಗೆ ಯುಪಿಎಸ್​ಸಿ ಮೂಲಕ ಪಾರದರ್ಶಕವಾಗಿ ಮತ್ತು ಯಾವುದೇ ವಿವಾದ, ಗೊಂದಲಗಳಿಲ್ಲದೆ ನೇಮಕಾತಿ ಪ್ರಕ್ರಿಯೆ ನಡೆಯುವಾಗ ರಾಜ್ಯದಲ್ಲೂ ಇಂಥ ಪಾರದರ್ಶಕ ವಾತಾವರಣ ಸೃಷ್ಟಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಅವರ ಪ್ರಶ್ನಗೆ ಸರ್ಕಾರ ಉತ್ತರಿಸಬೇಕಿದೆ. ಕೆಪಿಎಸ್​ಸಿಯನ್ನು ಶುದ್ಧೀಕರಣಗೊಳಿಸಬೇಕು, ಅಲ್ಲಿನ ಕೊರತೆಗಳನ್ನು ನಿವಾರಿಸಬೇಕು ಎಂಬ ಬೇಡಿಕೆಗೆ ಸರ್ಕಾರದಿಂದ ಪರಿಣಾಮಕಾರಿ ಸ್ಪಂದನೆ ಸಿಕ್ಕಿಲ್ಲ. ಇನ್ನಾದರೂ ಸರ್ಕಾರಿ ಹುದ್ದೆಗಳ ನೇಮಕಾತಿ ವ್ಯವಸ್ಥೆಯನ್ನು ಸುಗಮಗೊಳಿಸಲು ಸರ್ಕಾರ ಮುಂದಾಗಬೇಕು. ಭ್ರಷ್ಟಾಚಾರ ಮತ್ತು ಅವ್ಯವಹಾರದಂಥ ಜಾಲಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.