ನ್ಯೂಸ್

ನೀರು ಕೊಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಬಿಡಿ, ಕೆಡಿಪಿ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಗುಡುಗು

ಗಡಿಭಾಗದಲ್ಲಿ ಹೆಚ್ಚಿದ ಸಮಸ್ಯೆ ಗಂಭೀರತೆ ಪ್ರಸ್ತಾಪಿಸಿದ ಇಂಡಿ ಶಾಸಕ

ವಿಜಯಪುರ: ಭೀಕರ ಬರದ ಹಿನ್ನೆಲೆ ಗಡಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದು ‘ನೀರು ಕೊಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಬಿಟ್ಟು ಬಿಡಿ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಗುಡುಗಿದ್ದಾರೆ.

ಸುದೀರ್ಘ 11 ತಿಂಗಳ ಬಳಿಕ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಆರಂಭದಲ್ಲಿಯೇ ಕ್ಷೇತ್ರ ಜನರ ಕುಡಿಯುವ ನೀರಿನ ಸಮಸ್ಯೆ ಕುರಿತು ಉಸ್ತುವಾರಿ ಮಂತ್ರಿ ಎಂ.ಬಿ. ಪಾಟೀಲರ ಗಮನ ಸೆಳೆದ ಶಾಸಕರು, ‘ಈ ಹಿಂದೆ ಕುಡಿಯುವ ನೀರಿಗಾಗಿ ಮಹಾರಾಷ್ಟ್ರದ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಮಂಡಿಸಿದ್ದರು. ಇದೀಗ ಪರಿಸ್ಥಿತಿ ಉಲ್ಟಾ ಆಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಮಹಾರಾಷ್ಟ್ರದಲ್ಲಿ ನೀರು ನಿರ್ವಹಣೆ ಸಮರ್ಪಕವಾಗಿದೆ. ಗಡಿಭಾಗದಲ್ಲಿ ಹಳ್ಳಿಗಳಿಗೆ ನೀರಿನ ಪೂರೈಕೆಯಾಗುತ್ತಿದೆ. ಆದರೆ, ಕರ್ನಾಕದಲ್ಲಿ ಅದರಲ್ಲಿಯೂ ಆಲಮಟ್ಟಿ ಜಲಾಶಯ ಹೊಂದಿದ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಒಂದು ಕಾಲದಲ್ಲಿ ಮಹಾರಾಷ್ಟ್ರ ಸರ್ಕಾರ ರೈಲ್ವೆ ಮುಖಾಂತರ ಕುಡಿಯುವ ನೀರು ಪೂರೈಸಿದ ಉದಾಹರಣೆ ಇತ್ತು. ಇಂದು ಆ ರಾಜ್ಯದಲ್ಲಿ ನೀರಿನ ಪೂರೈಕೆ ಅತ್ಯಂತ ಸಮರ್ಪಕವಾಗಿದೆ. ಹೀಗಾಗಿ ಗಡಿಭಾಗದ ಜನ ಮಹಾರಾಷ್ಟ್ರ ಸೇರುವುದೇ ಒಳಿತು ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ’ ಎಂದು ಪರಿಸ್ಥಿಯ ಗಂಭೀರತೆಯನ್ನು ಅರುಹಿದರು.

‘ಪ್ರಸಕ್ತ ಸಾಲಿನಲ್ಲಿ ನೀರು ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ. ಹೀಗಾಗಿ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮಹಾರಾಷ್ಟ್ರಕ್ಕೆ ನಿಯೋಗ ಕೊಂಡೊಯ್ಯುವ ಬಗ್ಗೆ ಚರ್ಚೆಯಾಗಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ’ ಎಂದು ಎಚ್ಚರಿಸಿದರು.

ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡರು ಸಹ ‘ಕಣ್ಣೆದುರೇ ಕೃಷ್ಣಾ ನದಿಯಿದ್ದರೂ ನೀರಿನ ಅಭಾವ ಕಾಡುತ್ತಿದೆ’ ಎಂದರು.