ನ್ಯೂಸ್

ಬಿಹಾರ ಚುನಾವಣೆಗೆ ಹಣದ ದಾಖಲೆ ಕೊಡಿ: ಡಿ.ಕೆ.ಶಿವಕುಮಾರ್ | Challenge to BJP

ಬೆಂಗಳೂರು: "ವಿಜಯೇಂದ್ರ, ರಾಘವೇಂದ್ರ ಹಾಗೂ ಬಿಜೆಪಿ ಇತರೆ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕೆಲಸದ ಅನುಭವ ಸ್ಮರಿಸುತ್ತಾ, ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ರವಾನೆ ಮಾಡುತ್ತಿರುವುದಾಗಿ ಆರೋಪ ಮಾಡಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ತಮ್ಮ ಕೆಲಸವನ್ನು ಅವರು ಈಗ ಸ್ಮರಿಸುತ್ತಿದ್ದಾರೆ. ನಾವು ಅಂತಹ ಯಾವುದೇ ಕೆಲಸ ಮಾಡಿಲ್ಲ. ಅದರ ಅಭ್ಯಾಸವೂ ಇಲ್ಲ. ಅದರ ಅಗತ್ಯವೂ ಇಲ್ಲ. ಇದು ಕೇವಲ ಹಿಟ್ ಅಂಡ್ ರನ್ ಹೇಳಿಕೆ. ಅವರ ಬಳಿ ಈ ಆರೋಪಕ್ಕೆ ಪೂರಕವಾಗಿ ದಾಖಲೆಗಳಿದ್ದರೆ ತೋರಿಸಲಿ. ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ಕಾರಣಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ" ಎಂದರು.

ನವೆಂಬರ್ ವೇಳೆಗೆ ಸರ್ಕಾರ ಪತನವಾಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕೇಂದ್ರ ಸರ್ಕಾರದಲ್ಲಿ ಏನೋ ಸಮಸ್ಯೆ ಇರಬೇಕು ಹೀಗಾಗಿ ಅವರು ಈ ರೀತಿ ಹೇಳುತ್ತಿದ್ದಾರೆ. ಅವರ ಸರ್ಕಾರ ಪತನವಾಗಬಹುದು, ಕಾಂಗ್ರೆಸ್ ಸರ್ಕಾರವಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ 140 ಶಾಸಕರ ಭಾರಿ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವಿದೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಹಕಾರದ ಭರವಸೆ

ಕಿರಣ್ ಮಜುಂದಾರ್ ಷಾ ಭೇಟಿ ವೇಳೆ ಬೆಂಗಳೂರಿನ ಬಗ್ಗೆ  ಚರ್ಚೆ ಮಾಡಿದೆವು. ಬೆಂಗಳೂರು ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ, ಬೆಂಗಳೂರಿಗೆ ಧಕ್ಕೆ ತರುವುದಿಲ್ಲ ಎಂದು ಹೇಳಿದ್ದಾರೆ. ವ್ಯವಸ್ಥೆ ಜೊತೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇವೆ. ಜಿಬಿಎ ವ್ಯಾಪ್ತಿ ಹೊರತಾಗಿ ಬೆಂಗಳೂರಿನ ಹೊರ ಭಾಗದಲ್ಲಿರುವ ಸ್ಥಳೀಯ ಪಾಲಿಕೆಗಳನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದೇವೆ.

ಬುಧವಾರ ಅಥವಾ ಗುರುವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಶುಕ್ರವಾರ ಅವರ ಜತೆ ಸಭೆ ಮಾಡುತ್ತೇನೆ. ಆ ಭಾಗದ ತೆರಿಗೆ ಆದಾಯಕ್ಕೂ, ಬೆಂಗಳೂರಿನ ತೆರಿಗೆ ಆದಾಯಕ್ಕೂ ಭಾರಿ ವ್ಯತ್ಯಾಸವಿದೆ. ಹೀಗಾಗಿ ಆ ಪ್ರದೇಶದ ಅಭಿವೃದ್ಧಿ ಮಾಡಲಾಗುವುದು" ಎಂದು ತಿಳಿಸಿದರು.

ರಸ್ತೆಗಳ ಪಟ್ಟಿ ನೀಡಿದರೆ ಎಂದು ಕೇಳಿದಾಗ, "ಯಾವ ರಸ್ತೆ ಪಟ್ಟಿಯೂ ಇಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಐಟಿ- ಬಿಟಿ ಕ್ಷೇತ್ರದವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈಗ ಎಲ್ಲಾ ಪಾಲಿಕೆ ವ್ಯಾಪ್ತಿಯ ನಾಗರಿಕರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಮುಂದೆ ಕಂಪನಿಗಳ ಜೊತೆ ಚರ್ಚೆ ಮಾಡುವೆ. ಆನಂತರ ಬೆಂಗಳೂರು ಹೊರವಲಯದವರ ಜೊತೆ ಸಭೆ ಮಾಡಿ ಜನರಿಗೆ ಒಳ್ಳೆಯದಾಗುವಂತೆ ಕ್ರಮ ಕೈಗೊಳ್ಳುತ್ತೇವೆ" ಎಂದರು.

ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾವು ಜನರ ಬದುಕು ಸುಧಾರಿಸಿ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಮಿಕ್ಕ ವಿಚಾರ ನಮಗೆ ಬೇಕಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.