ಶಿವಮೊಗ್ಗ: ಮಾಜಿ ಸಿಎಂ ಎಸ್.ಬಂಗಾರಪ್ಪ ಪ್ರಬುದ್ಧ ರಾಜಕಾರಣಿಯಾಗಿದ್ದರು. ಆದರೆ ಅವರ ಪುತ್ರ ಮಧು ಬಂಗಾರಪ್ಪ ಅಪ್ರಬುದ್ಧರಂತೆ ಮಾತನಾಡುತ್ತಾರೆ. ಶಿಕ್ಷಣ ಸಚಿವರ ಬಾಯಲ್ಲಿ ಬರಬಾರದ ಮಾತುಗಳನ್ನು ಕೇಳುತ್ತಿದ್ದೇವೆ. ಅವರಿಗೆ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲ. ಸಾಲು ಸಾಲು ಕೃಷಿ ಭೂಮಿ ತೆರವು ಮಾಡುತ್ತಿದ್ದರೂ ರೈತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಬೆದರಿಸುವಂತೆ ಮಾತನಾಡುತ್ತಾರೆ. ಅದರ ಬದಲು ಅಭಿವೃದ್ಧಿ ಕೆಲಸ ಮಾಡಲಿ. ರೈತರ ಪರ ಪಾದಯಾತ್ರೆ ಮಾಡಿದರೆ ಸಾಲದು, ಅಧಿಕಾರ ಸಿಕ್ಕಾಗ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿತ್ರಶೆಟ್ಟಿಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಅಡಕೆ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಿತ್ತುಹಾಕಿದ್ದಾರೆ. ಹೊಸನಗರ ತಾಲೂಕು ವಸವೆಯಲ್ಲಿ ಫಸಲಿಗೆ ಸಿದ್ಧವಾಗಿದ್ದ ಅಡಕೆ ಗಿಡಗಳನ್ನು ಅರಣ್ಯ ಇಲಾಖೆಯವರು ಕಡಿದು ಹಾಕಿದ್ದಾರೆ. ಸಾಗರ ತಾಲೂಕಿನ ಶುಂಠಿ ಬೆಳೆ ತೆರವು ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತದಲ್ಲಿ ರೈತರಿಗೆ ಸಿಕ್ಕ ಕೊಡುಗೆಗಳಿವು ಎಂದರು.
ಸಮಯ ಸಿಕ್ಕಾಗಲೆಲ್ಲ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಮಧು ಬಂಗಾರಪ್ಪ ಟೀಕಿಸುತ್ತಾರೆ. ರಾಘವೇಂದ್ರ ಬಸ್‌ಸ್ಟಾೃಂಡ್ ಕಟ್ಟಿಸಿದ್ದಾರೆ. ವಿಮಾನ ನಿಲ್ದಾಣ, ಸೇತುವೆ ನಿರ್ಮಾಣಕ್ಕೂ ಶ್ರಮಿಸಿದ್ದಾರೆ. ಎರಡು ವರ್ಷದಲ್ಲಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸೊರಬದಲ್ಲಿ ಐದು ಇಸ್ಪೀಟ್ ಕ್ಲಬ್‌ಗಳಿದ್ದು, ಬಂದ್ ಮಾಡಿಸಿ ಎಂದು ಒತ್ತಾಯಿಸಿದರೆ ಹಾಲಪ್ಪನ ಇತಿಹಾಸ ಗೊತ್ತಿದೆ ಎಂದು ಸಚಿವರು ಹೇಳಿದ್ದಾರೆ. ಅವರ ಇತಿಹಾಸವೂ ನನಗೆ ಗೊತ್ತಿದೆ. ಸಮಯ ಬಂದಾಗ ಬಿಚ್ಚಿಡುತ್ತೇನೆ. ಬಂಗಾರಪ್ಪ ಅವರ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಜಿಲ್ಲಾ ಮಾಧ್ಯಮ ಸಂಚಾಲಕ ಕೆ.ವಿ.ಅಣ್ಣಪ್ಪ, ಸಹ ಸಂಚಾಲಕ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.