ಸಾಗರ: ಪಟ್ಟಣದಲ್ಲಿ ಬಂಟರ ಸಮಾಜ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ಕೊಡಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಸಾಗರದ ಎಸ್.ಎನ್.ನಗರದಲ್ಲಿರುವ ಬಂಟರ ಯಾನೆ ನಾಡವರ ಸಂಘದ ನೂತನ ಸಭಾಭವನ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸಹಯೋಗ ಕಲ್ಪಿಸಲು ಅವಕಾಶ ಇರುತ್ತದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿ ಬಂಟರ ಸಮಾಜದ ಒಗ್ಗಟ್ಟು ಉತ್ತಮವಾಗಿದೆ. ಇಂತಹ ಸಮಾಜಗಳ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಎಲ್ಲರೂ ಸಮುದಾಯದ ಒಳಿತಿಗೆ ಸಹಕಾರ ನೀಡಬೇಕು. ಭವನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಮಾತನಾಡಿ, ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸುತ್ತಿದ್ದು, ಈಗಾಗಲೆ 3 ಕೋಟಿ ರೂ. ವೆಚ್ಚವಾಗಿದೆ. ಇನ್ನು ಒಂದು ಕೋಟಿ ರೂ. ಅಗತ್ಯವಿದೆ. ಕ್ಷೇತ್ರದ ಶಾಸಕರು ಇಂತಹ ಕೆಲಸಕ್ಕೆ ಹೆಚ್ಚಿನ ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.
ಸುಧಾಕರ ಶೆಟ್ಟಿ, ಗೋಪಾಲ ಶೆಟ್ಟಿ, ರಘುಪತಿ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ಪ್ರಭಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸದಾನಂದ ಶೆಟ್ಟಿ ಇತರರಿದ್ದರು.