ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ಸ್‌ ವೃತ್ತಿನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆ, ಡಾ. ಕವಿತಾ ಯೋಗಪ್ಪನವರ್, ಅನಿಲ್‌ಕುಮಾರ್ ಭೂಮರಡ್ಡಿ, ಮಲ್ಲೇಶಪ್ಪ ಇತರರಿದ್ದರು. 
ನ್ಯೂಸ್

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ: ಡಿಸಿ ಸೂಚನೆ

ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕಾನೂನುಬದ್ಧವಾಗಿ ಎಲ್ಲ ಸೌಲಭ್ಯ ದೊರಕಿಸಿಕೊಡಬೇಕು. ಉದ್ಯೋಗ ಭದ್ರತೆ, ಆರೋಗ್ಯ, ಶಿಕ್ಷಣಕ್ಕೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ತಿಳಿಸಿದರು.

ಬುಧವಾರ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ಸ್‌ ವೃತ್ತಿನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ಹೋಟೆಲ್, ಕೈಗಾರಿಕೆಗಳಲ್ಲಿ ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಂಡು ಕಾನೂನನ್ನು ಉಲ್ಲಂಘಿಸಿರುವ ಮಾಹಿತಿ ಇದೆ. ಇದು ಮರುಕಳಿಸಬಾರದು ಎಂದು ಸೂಚಿಸಿದರು.

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛಗೊಳಿಸಿದ ಪ್ರಕರಣದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ತಿಳಿಸಿದರು.

ಶಿವಮೊಗ್ಗ ಮತ್ತು ಭದ್ರಾವತಿ ಅವಳಿ ನಗರಗಳ ಕೆಲವು ಹೋಟೆಲ್‌ಗಳು, ಭದ್ರಾವತಿಯ ರಂಗಪ್ಪ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆದ ಚರಂಡಿಗಳಿಗೆ ಶೌಚಗೃಹದ ನೀರು ಹರಿಸುತ್ತಿರುವ ಬಗ್ಗೆ ದೂರುಗಳಿವೆ. ಆಯುಕ್ತರು ಸ್ಥಳ ಪರಿಶೀಲಿಸಿ ತಪ್ಪಿತಸ್ಥರಿಗೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಮಾಡುವಾಗ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಅವರಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಶುಲ್ಕ ಭರಿಸಲು ನಗರ ಸ್ಥಳೀಯ ಸಂಸ್ಥೆಗಳ ವಂತಿಕೆಯಿಂದ ಹಣ ನೀಡಲು ಕ್ರಮ ಕೈಗ್ಳೊಳ್ಳಲಾಗಿದೆ ಎಂದರು.

ಎಎಸ್ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ನಗರಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಸಮಿತಿ ಸದಸ್ಯರಾದ ಚಿನ್ನಯ್ಯ, ಭಾನುಪ್ರಸಾದ್, ನಾಗರಾಜ್, ರಶ್ಮಿ ಇತರರಿದ್ದರು.