ಹೊಸನಗರ: ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದ ಕಾರಣ ರಾಜ್ಯ ಸರ್ಕಾರ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಆಶಾ ಪೇಮೆಂಟ್ ಪ್ರಕ್ರಿಯೆಗೆ ಆರ್‌ಸಿಎಚ್ ಪೋರ್ಟಲ್ ಲಿಂಕ್ ಮಾಡಿರುವುದನ್ನು ಕೈಬಿಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಮೊಬೈಲ್ ಡಾಟಾ ಒದಗಿಸಿ ಕೆಲಸ ತೆಗೆದುಕೊಳ್ಳಬೇಕು. ಯಾರಿಗೆ ಮೊಬೈಲ್ನಲ್ಲಿ ಕೆಲಸ ಮಾಡುವುದು ಕಷ್ಟವೋ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
60 ವರ್ಷಕ್ಕೆ ಸೇವಾ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜಾರಿಯಲ್ಲಿರುವ ಸೇವಾ ಅವಧಿಯ ನಂತರದ 5 ಲಕ್ಷ ರೂ. ನೆರವು ನೀಡುವಂತಾಗಬೇಕು. ಆಶಾ ಕಾರ್ಯಕರ್ತೆಯರು ಇನ್ನು ಉತ್ತಮ ಸೇವೆ ಸಲ್ಲಿಸಲು ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸಬೇಕು. ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತ ಫಲಾನುಭವಿಗಳನ್ನು ಆಶಾ ಕಾರ್ಯಕರ್ತೆಯನ್ನಾಗಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ನಾಗರತ್ನ, ಸಹಕಾರ್ಯದರ್ಶಿ ಸುಮಾ, ಶಾರದಾ, ನಗೀನಾ, ಪದ್ಮಾವತಿ, ಶೋಭಾ, ಸತ್ಯವತಿ, ಸರೋಜಾ, ಶಾಂತಾ ಇದ್ದರು.