ಮುಳಬಾಗಿಲು ತಾಲೂಕು ಕಚೇರಿ ಮುಂದೆ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಬಿ.ಎಸ್​.ವೆಂಕಟಾಚಲಪತಿಗೆ ಮನವಿ ಸಲ್ಲಿಸಿದರು.  
ನ್ಯೂಸ್

ಗಿಡ-ಮರಗಳ ಪರಿಹಾರ ನೀಡಿ

ಕಿರುವಾರ ಎಸ್.ಸುದರ್ಶನ್

ಮುಳಬಾಗಿಲು: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ಕಾರಿಡಾರ್​ ರಸ್ತೆ ಅಭಿವೃದ್ಧಿಗೆ ಭೂಸ್ವಾಧಿನವಾಗಿರುವ ತಾಲೂಕಿನ ಏತ್ತೂರಹಳ್ಳಿಯ ಸರ್ವೇ ನಂ.34 ರಲ್ಲಿನ ಗಿಡ-ಮರಗಳ ಪರಿಹಾರ, ತಾಲೂಕಿನಲ್ಲಿ ಒತ್ತುವರಿಯಾದ ಸರ್ಕಾರಿ ಆಸ್ತಿಗಳನ್ನು ರಸಲು ವಿಶೇಷ ತಂಡ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿ, ತಹಸೀಲ್ದಾರ್​ ಬಿ.ಎಸ್​.ವೆಂಕಟಾಚಲಪತಿಗೆ ಮನವಿ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, 10 ವರ್ಷಗಳ ಹಿಂದೆ ಬೆಂಗಳೂರು-ಚೆನ್ನೈ ಕಾರಿಡಾರ್​ ರಸ್ತೆ ಅಭಿವೃದ್ಧಿಗೆ ಭೂಸ್ವಾಧಿನವಾಗಿರುವ ಏತ್ತೂರಹಳ್ಳಿ ದಲಿತ ಕುಟುಂಬಕ್ಕೆ ಸೇರಿದ ಭೂಮಿ ಹಾಗೂ ಮರಗಿಡಗಳ ಪರಿಹಾರ ಪಡೆಯಲು ಹತ್ತಾರು ವರ್ಷಗಳಿಂದ ತಾಲೂಕಾಡಳಿತ ಅಧಿಕಾರಿಗಳ ಬಳಿ ಅಲೆದಾಡಿದರೂ ಕನಿಷ್ಠ ಸೌಜನ್ಯಕ್ಕಾದರೂ ರೈತರಿಗೆ ಗೌರವ ನೀಡದೇ ದಾಖಲೆಗಳನ್ನೂ ಕೊಡದೆ ಪ್ರತಿದಿನ ಸಬೂಬು ಹೇಳಿ ರೈತರನ್ನು ತಿರುಗಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಯ ಸಿಬ್ಬಂದಿ ಶ್ರೀನಿವಾಸ್​ ಕೇಳಿದರೆ ಆರ್​ಐ-ವಿಎ ವರದಿ ಬರಲಿ ಎಂದು ಹೇಳುತ್ತಾರೆ. ವರದಿ ಬಂದರೆ ತಹಸೀಲ್ದಾರ್​ ಸಿಗುತ್ತಿಲ್ಲ ಎಂದು ಹೇಳುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮವಿಲ್ಲವೆ?, ರೈತರೆಂದರೆ ಅಷ್ಟು ಬೇಜವಾಬ್ದಾರಿಯೇ?, ವರದಿಯ ಕಡತ ಇಲ್ಲವೆಂದರೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ ಎಂದು ನೊಂದ ರೈತರಾದ ಮಾರಪ್ಪ, ನಾರಾಯಣಸ್ವಾಮಿ ಪ್ರಶ್ನಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್​ ಬಿ.ಎಸ್​.ವೆಂಕಟಾಚಲಪತಿ ಮಾತನಾಡಿ, ನಾನು ಹೊಸದಾಗಿ ಬಂದಿದ್ದು, ರೈತರ ಸಮಸ್ಯೆ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ಸಿಬ್ಬಂದಿ ಕರೆಯಿಸಿ ಸಮಸ್ಯೆ ಬಗೆಹರಿಸುವ ಜತೆಗೆ ತಾಲೂಕಿನಲ್ಲಿ ಒತ್ತುವರಿಯಾದ ಸರ್ಕಾರಿ ಆಸ್ತಿಗಳನ್ನು ಮುಲಾಜಿಲ್ಲದೆ ತೆರೆವುಗೊಳಿಸುವ ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್​, ಮುಖಂಡರಾದ ಆನಂದ್​ರೆಡ್ಡಿ, ಮಂಜುನಾಥ್​, ಪಾರುಕ್​ಪಾಷಾ, ಬಂಗಾರಿ ಮಂಜು, ವಿಜಯ್​ಪಾಲ್​, ರಾಜೇಶ್​, ಭಾಸ್ಕರ್​, ಚಲಪತಿ, ರಾಮಮೂರ್ತಿ, ರೈತ ಮುಖಂಡರಾದ ಗೀರೀಶ್​, ತಿಮ್ಮಣ್ಣ, ಧರ್ಮ, ಕೇಶವ, ಶೈಲಜಾ, ರಾಧಮ್ಮ, ಶೋಭಾ, ಚೌಡಮ್ಮ, ಸುಗುಣ, ನಾಗರತ್ನ ಇದ್ದರು.