ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ-ಗುನ್ನಾಳ ಹತ್ತಿರ ಕೆಬಿಜೆಎನ್‌ಎಲ್ ಇಲಾಖೆಯಿಂದ ಸ್ಥಾಪಿಸಲಾದ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕೊಪ್ಪಳ-ಕನಕಗಿರಿ ಬ್ರ್ಯಾಂಚ್‌ನ ಮುಖ್ಯಸ್ಥಾವರ ಘಟಕದಿಂದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ರೈತರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ನ.9 ರಂದು ಕೆರೆ ತುಂಬಿಸುವ ಯೋಜನೆಗೆ ಸಿಎಂ ಚಾಲನೆ
ಕೃಷ್ಣಾ ಬಿಸ್ಕೀಂ ನೀರಾವರಿ ಭಾಗದ ಕೆರೆ ತುಂಬಿಸುವ ಯೋಜನೆಯಡಿ ಕೊಪ್ಪಳ-ಕನಕಗಿರಿ ಬ್ರ್ಯಾಂಚಿನ ಮುಖ್ಯ ಸ್ಥಾವರದಿಂದ ಕೊಪ್ಪಳ ಬ್ರ್ಯಾಂಚ್‌ನ ಗುನ್ನಾಳ, ಬೇವೂರು, ಕುಕನೂರು ತಾಲೂಕಿನ ನೆಲಜೇರಿ, ವಟಪರ್ವಿ, ಕುದರಿಮೋತಿ, ಕೊಪ್ಪಳ ತಾಲೂಕಿನ ಇರಕಲ್‌ಗಡ, ಬುಡಶೆಟ್ನಾಳ, ಹನುಮನಟ್ಟಿ, ಲೇಬಗೇರಿ, ಕಲಕೇರಿ, ಅಬ್ಬಿಗೇರಿ ಸೇರಿ 11 ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಒಮ್ಮೆ ಬಂದರೆ ಒಂದು ವಾರದವರೆಗೂ ಬರುವುದಿಲ್ಲ. ಕೇವಲ ಕನಕಗಿರಿ ಬ್ರ್ಯಾಂಚ್‌ನ ಕನಕಗಿರಿ, ಕಲಭಾವಿ-ಚಿಕ್ಕವಂಕಲಕುಂಟಾ, ಗಾಣಧಾಳ, ಚಿಕ್ಕಮನ್ನಾಪುರ ಭಾಗದ ಕೆರೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಪಂಪ್‌ಗೆ ನೀರು ಸಾಲುತ್ತಿಲ್ಲ ಎನ್ನುತ್ತಿದ್ದಾರೆ. ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸದೇ ಮಲತಾಯಿ ಧೋರಣೆ ಮಾಡುತ್ತಿದ್ದಾರೆ.
ಕೆರೆಗಳನ್ನು ತುಂಬಿಸುವುದರಿಂದ ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ. ರೈತರ ಪಂಪ್‌ಸೆಟ್‌ಗಳ ಅಂತರ್ಜಲ ಮಟ್ಟ ಸುಧಾರಿಸಲಿದೆ. ನೀರಾವರಿ ಭಾಗವಾದ ಕೆರೆ ತುಂಬಿಸುವ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕೇಳಿದಾಗಲಷ್ಟೇ ನೀರು ಹರಿಸುವ ಆಶ್ವಾಸನೆ ನೀಡುತ್ತಾರೆ. ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಹನುಮಂತಪ್ಪ ಬಡಿಗೇರ, ವಾಸಪ್ಪ ಗೌಡ್ರ, ಹಿರೇಶಿವಪ್ಪ ಕುದ್ರಕೊಟಗಿ, ವಿರೂಪಾಕ್ಷಗೌಡ ಪಾಟೀಲ್, ಭೀಮಣ್ಣ ಬುಡಶೆಟ್ನಾಳ, ಶಂಕ್ರಪ್ಪ ಟಿಕಲ್, ನಿಂಗಪ್ಪ ಕೊಳಜಿ, ಮರೆಗೌಡ ಆರ್.ಗೌಡ್ರ, ಬಸವರಾಜ ಮಾಲಿಪಾಟೀಲ್, ದ್ಯಾಮನಗೌಡ ಮಾಲಿಪಾಟೀಲ್, ಶೇಖಪ್ಪ ಡೊಳ್ಳಿನ, ವಿರೂಪಾಕ್ಷ ಚುಕಣಿ, ಮುತ್ತುಜಾಸಾಬ್ ನವಲಿ, ನಿಂಗಪ್ಪ ಗೌಡ್ರ, ರಾಜಶೇಖರ ಹನುಮನಾಳ ಇತರರಿದ್ದರು.