ನ್ಯೂಸ್

ಸಂಪಾದಕೀಯ: ಹೆಮ್ಮೆಯ ಸಾಧನೆ

ಬಾಬುಪ್ರಸಾದ್​ ಮೋಡಿಸ್​

‘ಆಕ್ಸಿಯಂ-4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್​ಎಸ್) ಪ್ರಯಾಣ ಬೆಳೆಸಿದ್ದು, ಬಾಹ್ಯಾಕಾಶ ಕ್ಷೇತ್ರದ ಯೋಜನೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದಂತಾಗಿದೆ.

ಭಾರತದ ಪಾಲಿಗಂತೂ ಇದು ಹೆಮ್ಮೆಯ ಮತ್ತು ಸಂತಸದ ಕ್ಷಣ. ಭಾರತ, ಹಂಗೇರಿ, ಪೊಲೆಂಡ್ ಮತ್ತು ಅಮೆರಿಕದ ಗಗನಯಾನಿಗಳನ್ನು ಹೊತ್ತ ಸ್ಪೇಸ್​ಎಕ್ಸ್ ಕ್ರ್ಯೂ ಡ್ರಾ್ಯಗನ್ ಸ್ಪೇಸ್​ಕ್ರಾಫ್ಟ್ ಯಶಸ್ವಿಯಾಗಿ ಐಎಸ್​ಎಸ್​ನತ್ತ ಸಾಗಿದ್ದು, ಮುಂದಿನ ಸಂಶೋಧನೆಗಳ ಬಗ್ಗೆ ಕುತೂಹಲ ಮೂಡಿಸಿದೆ. 1984ರಲ್ಲಿ ಭಾರತದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ, ಭಾರತದ ಮತ್ತೊಬ್ಬ ಗಗನಯಾನಿ ಬಾಹ್ಯಾಕಾಶಕ್ಕೆ ತೆರಳಿರುವುದು ಮಹತ್ವದ ಸಂಗತಿಯೇ ಹೌದು.

ಈ ಸಾಧನೆಗೆ ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಶುಭ ಹಾರೈಸಿದೆ. ‘ಶುಭಾಂಶು ಶುಕ್ಲಾ 140 ಕೋಟಿ ಭಾರತೀಯರ ಆಕಾಂಕ್ಷೆಗಳೊಂದಿಗೆ ತೆರಳಿದ್ದಾರೆ. ಅವರೊಂದಿಗೆ 140 ಕೋಟಿ ಜನರ ಭರವಸೆ ಮತ್ತು ಹಾರೈಕೆಗಳೂ ಇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಆರಂಭ. ನೀವೆಲ್ಲರೂ ಈ ಪ್ರಯಾಣದ ಭಾಗವಾಗಿರಬೇಕು ಎಂಬುದು ನನ್ನ ಬಯಕೆ. ನಾವೆಲ್ಲರೂ ಜೊತೆಯಾಗಿ ಭಾರತದ ಮಾನವ ಬಾಹ್ಯಾಕಾಶ ಯೋಜನೆಯನ್ನು ಆರಂಭಿಸೋಣ, ಜೈ ಹಿಂದ್, ಜೈ ಭಾರತ್’ ಎಂದು ಬಾಹ್ಯಾಕಾಶದಿಂದಲೇ ಶುಕ್ಲಾ ಹೇಳಿದ್ದಾರೆ.

ಈ ಯಾನ ಭಾರತಕ್ಕೂ ಹಲವು ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಲಿದ್ದು, ಬಾಹ್ಯಾಕಾಶ ರಂಗದ ಹೊಸ ಯೋಜನೆಗಳಿಗೆ ಪ್ರೇರಣೆಯಾಗಲಿದೆ. ಆಕ್ಸಿಯಂ-4 ಪ್ರಮುಖವಾಗಿ 2026ರಲ್ಲಿ ಸ್ವತಂತ್ರವಾಗಿ ಭಾರತೀಯ ಬಾಹ್ಯಾಕಾಶ ಯಾತ್ರಿಗಳನ್ನು ಗಗನಯಾನಕ್ಕೆ ಕಳುಹಿಸುವ ಯೋಜನೆಗೆ ಪ್ರಯೋಜನಕಾರಿ ಆಗಲಿದೆ. ಶುಕ್ಲಾ ಅವರ ಈ ಯಾತ್ರೆಯ ಅನುಭವ ಮುಂದಿನ ಮಾನವ ಬಾಹ್ಯಾಕಾಶ ಯಾತ್ರೆಯ ಸಾಮರ್ಥ್ಯವನ್ನು ಬಲಪಡಿಸಲಿದೆ.

ಅಷ್ಟೇ ಅಲ್ಲ, 2040ರ ಚಂದ್ರಯಾನಕ್ಕೂ ಇದು ಉಪಯುಕ್ತವಾಗಲಿದೆ. ಈ ಯಾನದ ಅಂತಾರಾಷ್ಟ್ರೀಯ ಸಹಕಾರವು ಭಾರತವನ್ನು ಜಾಗತಿಕ ವಾಣಿಜ್ಯ ಬಾಹ್ಯಾಕಾಶ ವಲಯಕ್ಕೆ ಸಂಯೋಜಿಸುತ್ತದೆ. ಇದರಿಂದ ಭವಿಷ್ಯದ ಜಂಟಿ ಮಿಷನ್, ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯ ಅವಕಾಶಗಳಿಗೆ ಬಾಗಿಲು ತೆರೆಯಲಿದೆ. ಇದು ಬಾಹ್ಯಾಕಾಶ ಶೋಧನೆಯಲ್ಲಿನ ಭಾರತದ ಸ್ಥಾನ ಎತ್ತರಕ್ಕೆ ಏರಿಸುವ ಜತೆಗೆ ವೈಜ್ಞಾನಿಕ, ತಾಂತ್ರಿಕ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೀಗಾಗಿಯೇ ಪ್ರಸಕ್ತ ಬಾಹ್ಯಾಕಾಶ ಯಾತ್ರೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 4 ಜನರ ಈ ತಂಡ 15 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು, 60 ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಿದೆ. ಈ ಪ್ರಯೋಗಗಳು ಯಶಸ್ವಿಯಾಗಲಿ, ಭಾರತ ಬಾಹ್ಯಾಕಾಶ ರಂಗದ ಸಾಧನೆಯಲ್ಲಿ ಇನ್ನೂ ಎತ್ತರಕ್ಕೆ ತಲುಪಲಿ ಎಂಬುದೇ ಆಶಯ.