ಚಂಡೀಗಢ: ಒಂದು ಗುಂಪಿನ ರೈತರು ಬಿಜೆಪಿ ಶಾಸಕರೊಬ್ಬರನ್ನು ಹಿಡಿದು ಥಳಿಸಿದ್ದಲ್ಲದೆ, ಬಟ್ಟೆ ಹರಿದು ಹಾಕಿ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್ನ ಮುಕ್ತ್ಸರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ನಡೆದಿದೆ.
ಅಬೊಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಸೇರಿದಂತೆ ಇತರೆ ಸ್ಥಳೀಯರ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಥಳಿಸಿದ್ದಾರೆ. ಶಾಸಕರು ಮಲೌತ್ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವಾಗ ಈ ದುರ್ಘಟನೆ ನಡೆದಿದೆ.
ಅರುಣ್ ನಾರಂಗ್ ಆಗಮನಕ್ಕಾಗಿ ಪ್ರತಿಭಟನಾಕಾರರು ಮೊದಲೇ ಬಿಜೆಪಿ ಕಚೇರಿಯ ಬಳಿ ಕಾಯುತ್ತಿದ್ದರು. ನಾರಂಗ್ ಬರುತ್ತಿದ್ದಂತೆ ಅವರ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಅಲ್ಲದೆ, ಅವರ ಕಾರನ್ನು ಸಹ ಕಪ್ಪು ಕಲೆಯುಕ್ತ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಪೊಲೀಸರು ಶಾಸಕರು ಮತ್ತು ಸ್ಥಳೀಯ ನಾಯಕರುಗಳನ್ನು ಹತ್ತಿರದ ಅಂಗಡಿಯೊಂದಕ್ಕೆ ಕರೆದೊಯ್ದರು. ತದನಂತರದಲ್ಲಿ ಅಂಗಡಿಯಿಂದ ಹೊರಬಂದಾಗ ಅರುಣ್ ನಾರಂಗ್ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಹೇಗೋ ಕೊನೆಯಲ್ಲಿ ನಾರಂಗ್ ಅವರನ್ನು ಪೊಲೀಸರು ರೈತರ ಗುಂಪಿಂದ ರಕ್ಷಣೆ ಮಾಡಿ ಕರೆದೊಯ್ದರು. ಘಟನೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದೀಗ ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಹಲ್ಲೆ ಮಾಡಿದವರ ಗುರು ಪತ್ತೆ ಕಾರ್ಯ ನಡೆಯುತ್ತಿದೆ.
ಇನ್ನು ಈ ಘಟನೆಯನ್ನು ಅಕಾಲಿದಳ ಮತ್ತು ಕಾಂಗ್ರೆಸ್ ಖಂಡಿಸಿದೆ. ನಾರಂಗ್ ಮೇಲೆ ಹಿಂಸಾತ್ಮಕ ಹಲ್ಲೆಯನ್ನು ಸಹಿಸಲಾಗದು. ಈ ವಿಚಾರದಲ್ಲಿ ಪಕ್ಷಪಾತವಿಲ್ಲದೆ ತನಿಖೆ ಮಾಡಿ ಇದರ ಹಿಂದಿರುವವರನ್ನು ಬಂಧಿಸಬೇಕು. ಚುನಾಯಿತಗೊಂಡ ಜನಪ್ರತಿನಿಧಿಗೆ ಪೊಲೀಸರು ಸೂಕ್ತ ರಕ್ಷಣೆ ಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುನ್ಲ್ ಜಖರ್ ಮಾತನಾಡಿ, ಇಂತಹ "ಕಾನೂನುಬಾಹಿರ ವರ್ತನೆಗೆ" ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ಈ ಘಟನೆಗಳಿಂದ ರೈತರ ಪ್ರತಿಭಟನೆ ದುರ್ಬಲಗೊಳ್ಳುತ್ತದೆ ಎಂದು ಹೇಳಿದರು.
ಆದರೆ, ಬಿಜೆಪಿ ಈ ಘಟನೆಯನ್ನು ವಿರೋಧಿಸಿದ್ದು ಇದರ ಹಿಂದೆ ಸಿಎಂ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರ ಮತ್ತು ಕಾಂಗ್ರೆಸ್ ಕೂಡ ಕೈಜೋಡಿಸಿದೆ ಎಂದು ದೂರಿದೆ. (ಏಜೆನ್ಸೀಸ್)