ಶಿವಮೊಗ್ಗ: ಶಾಂತಿ ನಗರದ ರಾಗಿಗುಡ್ಡಕ್ಕೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಬಡವರು, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ನೀರಿನ ಕಂದಾಯ ಪಾವತಿ ಮಾಡುತ್ತಿದ್ದರೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಯುಜಿಡಿ ವ್ಯವಸ್ಥೆ ಸಂಪೂರ್ಣವಾಗಿಲ್ಲ. ಇರುವ ಅಲ್ಪ ಸ್ಥಳಗಳಲ್ಲಿ ಪೈಪ್‌ಗಳು ಒಡೆದು ಹೋಗಿವೆ. ಒಡೆದ ಪೈಪ್‌ನಿಂದ ಕೊಳಚೆ ನೀರು ಕುಡಿಯುವ ನೀರಿನ ಪೈಪ್‌ನೊಂದಿಗೆ ಸೇರಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬಡಾವಣಿ ಮೂಲ ಸೌಕರ್ಯ ಸಮಸ್ಯೆ ಬಗ್ಗೆ ನಿರ್ಲಕ್ಷೃ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾಗರಿಕ ಹಕ್ಕುಗಳ ವೇದಿಕೆ ಪ್ರಮುಖರಾದ ಸೈಯದ್ ಮುಜೀಬುಲ್ಲಾ, ರಾಮು, ಸೈಮನ್ ರಾಜು, ಇರ್ಫಾನ್, ಕೃಷ್ಣ, ಸೈಮನ್, ಮನ್ಸೂರ್, ಸುಬಾನ್, ಅಬು ತಾಹೀರ್, ಪುಷ್ಪಾ ಇತರರಿದ್ದರು.