ನ್ಯೂಸ್

ಮಾದಿಗ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹ

ಜಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಉಪ ಜಾತಿ ಮಾದಿಗ ಎಂದು ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಸೋಮವಾರ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿತು.

ಈ ವೇಳೆ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸುಮಾರು 103 ಉಪ ಜಾತಿಗಳಿದ್ದು, ನಾವೆಲ್ಲರೂ ಎಸ್​ಸಿ, ಎಸ್​ಟಿ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಆದಿ ಕರ್ನಾಟಕ, ಆದಿ ದ್ರಾವಿಡ ಹೀಗೆ ಜಾತಿ ಪ್ರಮಾಣಪತ್ರ ಮಾಡಿಸುತ್ತಿದ್ದೆವು ಎಂದರು.

ಆದರೆ, ಕಳೆದ 4 ತಿಂಗಳ ಹಿಂದೆ ರಾಜ್ಯ ಸಮ್ಮಿಶ್ರ ಸರ್ಕಾರ ನೂತನವಾಗಿ ಆದಿ ಜಾಂಬವ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿರುತ್ತದೆ. ಇದರಲ್ಲಿ ಆದಿಜಾಂಬವ ಇದರ ಪರ್ಯಾಯ ಪದ ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಸಾಲ, ಸವಲತ್ತುಗಳನ್ನು ವಿಂಗಡಣೆ ಮಾಡಿರುತ್ತದೆ. ಹಿಂದೆ ಎಡ, ಬಲ ಸಮುದಾಯಗಳೆರಡೂ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣಪತ್ರವನ್ನು ತೆಗೆದುಕೊಂಡಿದ್ದು, ಈಗ ಹೊಸ ನಿಯಮದ ಪ್ರಕಾರ ಸವಲತ್ತು ವಿತರಣೆ ಮಾಡಲು ಎಡ ಮತ್ತು ಬಲ ಎಂದು ಗುರುತಿಸುವುದು ಕಷ್ಟಸಾಧ್ಯವಾಗಿದೆ ಎಂದು ತಿಳಿಸಿದರು.

ನಿಗಮದ ವ್ಯವಸ್ಥಾಪಕರು ನಿಮ್ಮ ಪರಿಶಿಷ್ಟ ಜಾತಿಯಲ್ಲಿ ಬರುವ ಉಪ ಜಾತಿಗಳ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬರಬೇಕು, ಆಗ ನಾವು ಗುರುತಿಸಲು ಸಾಧ್ಯವಾಗುತ್ತದೆ ಎಂದು ಫಲಾನುಭವಿಗಳಿಗೆ ತಿಳಿಸಿದ್ದಾರೆ. ಎಸ್ಟಿ ಪಟ್ಟಿಯಲ್ಲಿನ ಜಾತಿಗಳಲ್ಲಿ ಆದಿಜಾಂಬವ ಎಂಬ ಹೆಸರು ಬರುವುದಿಲ್ಲ. ಅದರ ಬದಲು ಮಾದಿಗ ಎಂದು ಇದೆ. ಆದ್ದರಿಂದ ಮಾದಿಗ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರವನ್ನು ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ಶಿಕ್ಷಕ ಪಿ. ಶಿವಣ್ಣ ಮಾತನಾಡಿ, ಈಗಾಗಲೇ ಜಾತಿ ಗಣತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಾಗಿದ್ದು, ಜಾತಿ ಪ್ರಮಾಣಪತ್ರ ನೀಡುವ ಸಮಯದಲ್ಲಿ ಹಳೆಯ ಆದಿಕರ್ನಾಟಕ ಜಾತಿ ಪ್ರಮಾಣಪತ್ರ ನೋಡಿ ಹೊಸದಾಗಿ ದಾಖಲೆ ಕೇಳದೇ ಆರ್​ಡಿ ನಂಬರ್ ಅಡಿಯಲ್ಲಿ ಮಾದಿಗ ಜಾತಿ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದರು.

ಸಮಿತಿ ತಾಲೂಕಾಧ್ಯಕ್ಷ ಹನುಮಂತಪ್ಪ, ರಾಜನಹಟ್ಟಿ ಚಂದ್ರಪ್ಪ, ತಾಯಿಟೋಣಿ ತಿಪ್ಪೇಸ್ವಾಮಿ, ವಕೀಲ ಭರಮಸಮುದ್ರ ಮಹಾಂತೇಶ್, ದೊಣೆಹಳ್ಳಿ ಬಸವರಾಜ್, ಕ್ಯಾಂಪ್ ಗಿರೀಶ್, ಮಾಚಿಕೆರೆ ಯಲ್ಲಪ್ಪ, ದೇವರಾಜ್, ರೇಣುಕೇಶ್ ಮತ್ತಿತರರು ಹಾಜರಿದ್ದರು.