ನ್ಯೂಸ್

ರಸ್ತೆ ನಿರ್ಮಾಣ ಮಾಡದಿದ್ದರೆ ಚುನಾವಣೆ ಬಹಿಷ್ಕಾರ

ಎ. ಆರ್. ರಘುರಾಮ


ಪಾಂಡವಪುರ : ಜಮೀನುಗಳಿಗೆ ತೆರಳಲು ರಸ್ತೆ ನಿರ್ಮಿಸಿ ಕೊಡದಿದ್ದರೆ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಬೀರಶೆಟ್ಟಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಿನ ಹಿರೇಮರಳಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸೋಮವಾರ ಜಮಾವಣೆಗೊಂಡ ರೈತರು, ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದರೂ ಸ್ಪಂದಿಸದ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೋಡೆ ಕೆರೆಗೆ ಸೇರಿದ ಉತ್ತರದ ಜಮೀನನ್ನು ಸರ್ಕಾರ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಜಮೀನನ್ನು ಸರ್ವೇ ಮಾಡಿ ಗಡಿ ಗುರುತಿಸಿ, ರೈತರ ಜಮೀನುಗಳಿಗ ತೆರಳಲು ರಸ್ತೆ ಬಿಟ್ಟುಕೊಡಬೇಕು. ಆದರೆ ಈವರೆಗೂ ಸರ್ವೇ ನಡೆಸಿ ಗಡಿ ಗುರುತಿಸುವ ಕೆಲಸ ಆಗಿಲ್ಲ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ
ಸ್ಪಂದಿಸಿಲ್ಲ. ಸದ್ಯ ನಿಗದಿಗೊಳಿಸಿರುವ ಜಮೀನು ಸಂಪೂರ್ಣ ಹಳ್ಳಮಯವಾಗಿದೆ. ಇದನ್ನು ಭರ್ತಿ ಮಾಡಲು ರೈತರು ತಮ್ಮೆಲ್ಲ ಜಮೀನುಗಳನ್ನು ಮಾರಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಿರಿಯ ರೈತ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ಈಗಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಹೇಗೋ ಜೀವನ ಮಾಡೋಣ ಅಂದರೆ ಜಮೀನಿಗೆ ತೆರಳಲು ರಸ್ತೆಯೇ ಇಲ್ಲವಾಗಿದೆ. ಫಸಲು ಸಾಗಿಸಲು ರಸ್ತೆಯೇ ಇಲ್ಲವೆಂದ ಮೇಲೆ ಅದನ್ನು ಏನು ಮಾಡುವುದು ಎಂದು ಪ್ರಶ್ನಿಸಿದರು.
ನಾನು ಇಳಿ ವಯಸ್ಸಿನಲ್ಲೂ ರಸ್ತೆಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳದೇ ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ತನೆ ನಮಗೆ ಪ್ರಾಣಸಂಕಟ ತರುತ್ತಿದೆ ಎಂದು ದೂರಿದರು.
ಗಡುವು ನಿಗದಿ: ಏ.14ರೊಳಗೆ ಅಧಿಕಾರಿಗಳು ರಸ್ತೆ ನಿರ್ಮಿಸಿಕೊಡದಿದ್ದರೆ ಜಮೀನಿನ ಬಳಿ ಪ್ರತಿಭಟನೆ ನಡೆಸುವುದರೊಂದಿಗೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಮುಖಂಡರಾದ ಮಧು, ಆನಂದ, ನಂಜುಂಡ, ನಿಂಗಮ್ಮ, ಲಕ್ಷ್ಮಮ್ಮ, ಕುಳ್ಳೇಗೌಡ, ಶ್ರೀಕಂಠೇಗೌಡ, ಜವರೇಗೌಡ, ಮಧುಸೂದನ, ಚಿದಾನಂದ ಇತರರು ಇದ್ದರು.