ಸಿದ್ದಾಪುರ: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಮಾ.22 ರಂದು ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ವಿ.ಕೆ. ಗಿರೀಶ್ ತಿಳಿಸಿದ್ದಾರೆ.
ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರ ಪಾಲಿಬೆಟ್ಟ ರಸ್ತೆಯಿಂದ ಇಂಜಿಲಗೆರೆವರೆಗಿನ 2 ಕಿ.ಮೀ. ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ತಿಂಗಳುಗಳು ಕಳೆದಿದ್ದು ಮತ್ತೊಂದು ಮಳೆಗಾಲಕ್ಕೆ ಕೆಲವೇ ಸಮಯವಿದೆ. ಹಳೇ ಸಿದ್ದಾಪುರದಿಂದ ಪಾಲಿಬೆಟ್ಟ ರಸ್ತೆಯವರೆಗೆ ಒಂದು ಬದಿಯ ಚರಂಡಿಯನ್ನು ಅಧಂಬರ್ಧ ಕೆಲಸ ಮಾಡಿದ್ದು, ಅಲ್ಲಲ್ಲಿ ಬಾಕಿ ಇಟ್ಟಿದ್ದಾರೆ. ಚರಂಡಿಯ ಗುಂಡಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಬಿದ್ದು ಕಾಲಿಗೆ ಗಾಯವಾಗಿದೆ. ರಸ್ತೆ ಬದಿಯ ವಿದ್ಯುತ್ ಕಂಬ ತೆರವುಗೊಳಿಸಿಲ್ಲ. ಆ ಪ್ರಕ್ರಿಯೆಗೆ ಚಾಲನೆಯೂ ನೀಡಿಲ್ಲ. ಒಂದು ಬದಿಯಲ್ಲಿ ಅರ್ಧಕ್ಕೆ ಕಾಮಗಾರಿ ಮಾಡಿ ಮತ್ತೊಂದು ಬದಿಯಲ್ಲಿ ಚರಂಡಿ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಮುಖಂಡರು, ವರ್ತಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯವರು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಹಾಗೂ ಗುತ್ತಿಗೆದಾರರಲ್ಲಿ ಎಷ್ಟೇ ಮನವಿ ಮಾಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಒತ್ತಾಯಿಸಿ ಸಿದ್ದಾಪುರದ ಸ್ಥಳೀಯರು, ವರ್ತಕರು, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಾ.22ರ ಬೆಳಗ್ಗೆ 10.30 ಗಂಟೆಗೆ ನಾಗರಿಕ ಹಿತರಕ್ಷಣಾ ಸಮಿತಿ ವಿರಾಜಪೇಟೆ ರಸ್ತೆಯಲ್ಲಿ ರಾಜಕೀಯ ರಹಿತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.