ನ್ಯೂಸ್

ಪಿರಿಯಾಪಟ್ಟಣದಲ್ಲಿ ದಸಂಸ ಮುಖಂಡರ ಪ್ರತಿಭಟನೆ

ಪಿರಿಯಾಪಟ್ಟಣ: ತಾಲೂಕಿನ ತಹಸೀಲ್ದಾರರಿಂದ ದಲಿತರ ಅಭಿವ್ಯಕ್ತಿ ಸ್ವಾತಂತ್ರ್ಯ ಧಮನವಾಗುತ್ತಿದೆ ಎಂದು ದಸಂಸ ಮುಖಂಡರು ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ತಾಲೂಕು ದಸಂಸ ಘಟಕ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕಿನ ತಹಸೀಲ್ದಾರ್ ಕುಂಇ ಅಹಮದ್‌ರ ಆಡಳಿತ ವೈಖರಿಯನ್ನು ಖಂಡಿಸಿದರು.

ಪಟ್ಟಣದ ಪೊಲೀಸ್ ಠಾಣೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ 50ಕ್ಕೂ ಹೆಚ್ಚು ಮುಖಂಡರೊಂದಿಗೆ ಬಿ.ಎಂ.ರಸ್ತೆಯಲ್ಲಿ ತಮಟೆ ಬಾರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ತಾಲೂಕು ಕಚೇರಿ ಆವರಣ ತಲುಪಿತು.

ದಸಂಸ ಮೈಸೂರು ವಿಭಾಗದ ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಭೂ ಸಂಬಂಧಿತ ಸಮಸ್ಯೆಗಳು ಇದ್ದು ಇವುಗಳನ್ನು ನ್ಯಾಯಯುತವಾಗಿ ಬಗೆಹರಿಸಬೇಕಾದ ತಹಸೀಲ್ದಾರ್ ಅವರು ನ್ಯಾಯ ಕೇಳಲು ಬಂದವರ ವಿರುದ್ಧವೇ ದೂರು ನೀಡಿ ಜೈಲಿಗೆ ಕಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿರುವ ತಹಸೀಲ್ದಾರ್ ಅವರು ದಲಿತರ ಮನವಿಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ. ಆದರೆ ಪ್ರಸ್ತುತ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಕುಂಇ ಅಹಮದ್ ಅವರು ನ್ಯಾಯ ಕೇಳಲು ಬಂದ ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಭೂ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಂತೆ ಈ ಹಿಂದೆ ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ನಿರತರಿಂದ ತಾಲೂಕು ಕಚೇರಿಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಚಾಪೆ, ಟಾರ್ಪಲ್, ಬ್ಯಾನರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಫೋಟೋಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು.

ಜನಂದೋಲನಗಳ ಮಹಾ ಮೈತ್ರಿಯ ಮೈಸೂರಿನ ಉಗ್ರ ನರಸಿಂಹೇಗೌಡ, ಪಿರಿಯಾಪಟ್ಟಣ ತಾಲೂಕು ದಸಂಸ ಮುಖಂಡರಾದ ಆರ್.ಎಸ್.ದೊಡ್ಡಣ್ಣ, ಭೂತನಹಳ್ಳಿ ಜಗದೀಶ್, ಎಚ್.ಡಿ.ಕೋಟೆಯ ಚಾ.ನಂಜುಂಡ ಮೂರ್ತಿ, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕೆಆರ್‌ಎಸ್ ಪಕ್ಷದ ರೈತ ಘಟಕ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಮಾತನಾಡಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಪಿರಿಯಾಪಟ್ಟಣ ತಾಲ್ಲೂಕು ಮುಖಂಡರಾದ ಚಾಮರಾಯನಕೋಟೆ ಜಗದೀಶ್, ದೊಡ್ಡಯ್ಯ, ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿ ಕೆ.ಆರ್. ಪ್ರಭುಸ್ವಾಮಿ, ತಾಲೂಕು ಅಧ್ಯಕ್ಷ ರಾಮನಾಥತುಂಗಾ ಶ್ರೀನಿವಾಸ್, ಆರ್‌ಪಿಐ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ರಾಜು, ಮಹಿಳಾ ಮುಖಂಡರಾದ ಚನ್ನಮ್ಮ, ಸಾವಿತ್ರಮ್ಮ, ಮಹದೇವಮ್ಮ, ಕಾಳಮ್ಮ, ಜನಾಂದೋಲನಗಳ ಮಹಾ ಮೈತ್ರಿ ಮೈಸೂರಿನ ಮುಖಂಡರಾದ ಅಭಿರುಚಿ ಗಣೇಶ್, ಭೀಮ್ ಆರ್ಮಿ ಭಾರತ ಏಕತಾ ಮಿಷನ್ ರಾಜ್ಯ ಸಮಿತಿಯ ಅಕ್ರಂ ಪಾಷ ಮತ್ತಿತರರಿದ್ದರು.

ಪ್ರತಿಭಟನಾಕಾರರು ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಕಂದಾಯ ಸಚಿವರಿಗೆ ಮನವಿ ಪತ್ರಗಳನ್ನು ಶಿರಸ್ತೇದಾರ್ ವಿನೋದ್‌ಕುಮಾರ್ ಅವರ ಮೂಲಕ ಸಲ್ಲಿಸಿದರು. ವಶಪಡಿಸಿಕೊಂಡಿರುವ ಎಲ್ಲ ಪರಿಕರಗಳು ಖಜಾನೆಯಲ್ಲಿದ್ದು ಮಂಗಳವಾರ ವಾಪಸ್ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.